ಮೊಟ್ಟೆ ಪ್ರಿಯರಿಗೆ ದರ ಏರಿಕೆ ಬಿಸಿ!

KannadaprabhaNewsNetwork |  
Published : Dec 16, 2025, 02:30 AM IST
ಪೋಟೋ ಇದೆ. | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ಹೋಲ್‌ಸೇಲ್‌ ದರ ನೂರಕ್ಕೆ ₹ 690 ವರೆಗೂ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದೊಂದು ಮೊಟ್ಟೆಗೆ ₹ 8ಕ್ಕೆ ಮಾರಾಟವಾಗುತ್ತಿದ್ದು, ಡಜನ್‌ಗಟ್ಟಲೇ ಖರೀದಿಸುವವರಿಗೆ ಒಟ್ಟು ₹ 6ರಿಂದ ₹ 12 ಕಡಿಮೆಯಾಗುತ್ತಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆಗೆ ಮುನ್ನವೇ ಈ ಬಾರಿ ಹುಬ್ಬಳ್ಳಿ ಸೇರಿ ರಾಜ್ಯದ ಬಹುತೇಕ ಕಡೆ ಕೋಳಿ ಮೊಟ್ಟೆ ದರ ಏರಿಕೆಯಾಗಿದ್ದು, ಹಬ್ಬ ಹಾಗೂ ಹೊಸ ವರ್ಷದ ಸಿದ್ಧತೆಯಲ್ಲಿ ಇದ್ದವರಿಗೆ ತಲೆ ಬಿಸಿಯುಂಟು ಮಾಡಿದೆ.

ಹುಬ್ಬಳ್ಳಿಯಲ್ಲಿ ಹೋಲ್‌ಸೇಲ್‌ ದರ ನೂರಕ್ಕೆ ₹ 690 ವರೆಗೂ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದೊಂದು ಮೊಟ್ಟೆಗೆ ₹ 8ಕ್ಕೆ ಮಾರಾಟವಾಗುತ್ತಿದ್ದು, ಡಜನ್‌ಗಟ್ಟಲೇ ಖರೀದಿಸುವವರಿಗೆ ಒಟ್ಟು ₹ 6ರಿಂದ ₹ 12 ಕಡಿಮೆಯಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಗಾಣಿಕೆ ಪ್ರದೇಶದಿಂದ ತೆರಳುವ ಪ್ರದೇಶದ ವರೆಗೆ ಸಾಗಾಣಿಕೆ ವೆಚ್ಚ ಸೇರಿ ಬೇರೆ ಬೇರೆ ದರವಿದೆ.

ಅಕ್ಟೋಬರ್‌ನಲ್ಲಿ ₹ 6 ಅಥವಾ ಅದಕ್ಕೂ ಕಡಿಮೆ ದರಕ್ಕೆ ಮೊಟ್ಟೆ ಮಾರಾಟವಾದರೆ ದೀಪಾವಳಿ ಬಳಿಕ ಏರಿಕೆಯಾಗಿದೆ. ಹುಬ್ಬಳ್ಳಿಗೆ ಹೊಸಪೇಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಆಗಮಿಸುತ್ತಿದ್ದು, ಸಾಗಾಣಿಕೆ ವೆಚ್ಚ ಹಾಗೂ ಕೋಳಿ ಆಹಾರದ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಿದೆ. ಇದು ಜನವರಿ ಅಂತ್ಯದ ವರೆಗೂ ಮುಂದುವರಿಯಲಿದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಸ್ಥರು.

ಶಾಲೆಗಳಿಂದ ಹೆಚ್ಚಿನ ಬೇಡಿಕೆ:

ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ 2022ರಿಂದ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಿದ್ಯಾರ್ಥಿಗಳಿಗೆ ಪೋಷಕಾಂಶ ಪೂರೈಸಲು ಬೇಯಿಸಿದ ಮೊಟ್ಟೆ ವಿತರಿಸಲಾಗುತ್ತಿದೆ. ಲಕ್ಷೋಪಲಕ್ಷ ಮೊಟ್ಟೆಗಳು ಶಾಲೆಗಳಿಗೆ ಹೋಗುತ್ತಿದ್ದು, ಶಾಲಾ ದಿನಗಳಲ್ಲಿ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿರುತ್ತದೆ.

ತರಹೇವಾರಿ ಖಾದ್ಯ:

ಕೋಳಿ ಮೊಟ್ಟೆಗಳಿಂದ ಆಮ್ಲೇಟ್, ಹಾಫ್‌ ಪ್ರೈ, ಮೊಟ್ಟೆ ಬೇಯಿಸಿದ ಬಳಿಕ ಕರಿ ಜತೆ ಸೇರಿಸುವುದು, ಬಿರಿಯಾನಿ, ಕುಷ್ಕಾ, ಬುರ್ಜಿ, ಹೈದರಾಬಾದಿ, ಕೊಲ್ಲಾಪುರಿ.. ಹೀಗೆ ಮೊಟ್ಟೆಯಿಂದ ತಯಾರಾಗದ ಖಾದ್ಯಗಳೇ ಇಲ್ಲ. ರೊಟ್ಟಿ, ಚಪಾತಿ, ಪರೋಟಾ, ತಂದೂರಿ ರೊಟ್ಟಿ ಜತೆ ಸೇರಿಸಿ ತಿನ್ನುತ್ತಿದ್ದರೆ ಊಟ ರುಚಿ ಮತ್ತಷ್ಟು ಇಮ್ಮಡಿಸುತ್ತದೆ. ಪಟ್ಟಣ, ನಗರ, ಮಹಾನಗರದಂಥ ಪ್ರದೇಶಗಳಲ್ಲಿ ಎಗ್‌ರೈಸ್‌, ಫ್ರೈಡ್ ರೈಸ್ ಅಂಗಡಿಗಳೇ ಕಂಡು ಬರುತ್ತಿದ್ದು, ಈ ಅಂಗಡಿಗಳ ಮಾಲೀಕರೇ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಖರೀದಿಸುವ ಗ್ರಾಹಕರಾಗಿದ್ದಾರೆ. ಕೇಕ್‌ ಹಾಗೂ ಎಗ್‌ ಪಪ್ಪಸ್‌ ತಯಾರಿಕೆಯಲ್ಲೂ ಬೇಕರಿಯಲ್ಲಿ ಬಳಸಲಾಗುತ್ತಿದ್ದು, ಶ್ರಾವಣಮಾಸ ಹೊರತುಪಡಿಸಿ ವರ್ಷದ ಬಹುತೇಕ ದಿನಗಳಲ್ಲಿ ಮೊಟ್ಟೆಗಳಿಗೆ ಮಾರುಕಟ್ಟೆಗಳಲ್ಲಿ ಬೇಡಿಕೆ ಇದ್ದೆ ಇರುತ್ತದೆ.

ಪೋಷಕಾಂಶಗಳ ಆಗರ:

''''ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ'''' ಎಂಬುವುದರಲ್ಲಿ ಅರ್ಥವಿದೆ. ಮೊಟ್ಟೆಯಲ್ಲಿ 13 ಅತ್ಯವಶ್ಯಕವಾದ ಪ್ರೊಟೀನ್‌ಗಳಿವೆ. ವಿಟಾಮಿನ್ ಬಿ12, ಮೊಟ್ಟೆ 50 ಗ್ರಾಂ ತೂಕವಿದ್ದು, ಅದರಲ್ಲಿ 70 ಕ್ಯಾಲೋರಿ ಇರುತ್ತದೆ. ಹೀಗಾಗಿ ಮೊಟ್ಟೆ ಸೇವನೆ ಅತಿ ಅವಶ್ಯವಾಗಿದ್ದು, ದೇಹವನ್ನು ಗಟ್ಟಿಗೊಳಿಸುತ್ತದೆ ಎಂದು ವೈದ್ಯರು ವಿಶ್ಲೇಷಿಸುತ್ತಾರೆ.

ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಸಂದರ್ಭದಲ್ಲಿ ಮೊಟ್ಟೆ ದರ ಹೆಚ್ಚಾಗುತ್ತದೆ. ಆದರೆ, ಈ ಬಾರಿ ಅವಧಿಗೆ ಮೊದಲೇ ದರ ಹೆಚ್ಚಾಗಿದ್ದು, ವರ್ಷಾಂತ್ಯಕ್ಕೆ ದರ ಹೆಚ್ಚಾಗಬಹುದು ಇಲ್ಲವೇ ಇದೇ ದರ ಯಥಾಸ್ಥಿತಿಯಲ್ಲಿ ಉಳಿಯಬಹುದು. ಮಾಮೂಲಿ ದಿನಗಳಲ್ಲಿ ದಿನವೊಂದಕ್ಕೆ 2 ಸಾವಿರ ಮೊಟ್ಟೆ ಮಾರುತ್ತಿವೆ. ಈಗ ದಿನಕ್ಕೆ 3 ಸಾವಿರ ಮೊಟ್ಟೆ ಮಾರುತ್ತಿದ್ದೇವೆ.

ಅಸ್ಲಂ, ಬಾಬಾ ಚಿಕನ್‌ ಸೆಂಟರ್‌ ಮಾಲೀಕ, ಕೇಶ್ವಾಪುರಒಂದು ಅಥವಾ ಎರಡು ಮೊಟ್ಟೆ ಖರೀದಿಸಿದರೆ ₹ 8 ಒಂದು ಕೊಡುತ್ತೇವೆ. ಅರ್ಧ ಡಜನ್‌ ಇಲ್ಲವೇ ಡಜನ್‌ ಖರೀದಿಸಿದರೆ ₹ 7.50ಗೆ ಒಂದು ಕೊಡುತ್ತೇವೆ. ಮೊಟ್ಟೆ ದೇಹ ಬೆಚ್ಚಗಿಡಲು ಉತ್ತಮ ಆಹಾರವಾಗಿದ್ದು, ಚಳಿಯ ಈ ದಿನಗಳಲ್ಲಿ ಗ್ರಾಹಕರು ಮೊಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ.

ಮಂಜುನಾಥ ನ್ಯೂಪ್ರಭಾತ ಕಿರಾಣಿ ಸ್ಟೋರ್ ಮಾಲೀಕ, ನಾಗಶೆಟ್ಟಿಕೊಪ್ಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!