ಕೊಪ್ಪಳ: ವಿಶ್ವಕರ್ಮ ಮಹಾ ಒಕ್ಕೂಟದ ಕೊಪ್ಪಳ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದಲ್ಲಿ ಅದ್ಧೂರಿಯಾಗಿ ಜರುಗಿತು. ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ (ಕನಕಗಿರಿ) ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಳಿಕ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯವು ಸಮಸಮಾಜ ನಿರ್ಮಾಣ ಹಾಗೂ ಸಾಮಾಜಿಕ ನ್ಯಾಯದಡಿಯಲ್ಲಿ ನ್ಯಾಯ ಪಡೆಯಬೇಕಾದರೆ ಸಂಘಟನೆ, ಜಾಗೃತಿ ಮತ್ತು ಅರಿವು ಅತ್ಯಂತ ಅಗತ್ಯವಾಗಿದೆ. ರಾಜಕೀಯ ಪ್ರಾತಿನಿಧ್ಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವಕರ್ಮ ಸಮುದಾಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘಟನೆ ಬಲವರ್ಧನೆ ಅಗತ್ಯವಾಗಿದ್ದು, ಸರ್ಕಾರದ ಯೋಜನೆಗಳನ್ನು ನ್ಯಾಯಯುತವಾಗಿ ಪಡೆದುಕೊಳ್ಳಲು ಸಮುದಾಯದವರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಇತಿಹಾಸಕ್ಕೆ ಸಂಬಂಧಿಸಿದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಉಂಟಾಗಿರುವ ಅಡೆತಡೆಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ವಿಶ್ವಕರ್ಮ ಸಮುದಾಯ ನಾಡಿನ ಒಳಿತಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರೂ ಸಾಮಾಜಿಕ ನ್ಯಾಯದಡಿ ಆಗುತ್ತಿರುವ ಅನ್ಯಾಯವನ್ನು ವಿಶ್ವಕರ್ಮ ಮಹಾ ಒಕ್ಕೂಟ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸುವ ಶಕ್ತಿ ವಿಶ್ವಕರ್ಮ ಸಮಾಜಕ್ಕಿದೆ ಎಂದರು.ಈ ವೇಳೆ ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯ ಸಂಚಾಲಕರಾಗಿ ಕರಾಟೆ ಮೌನೇಶ ವಡ್ಡಟ್ಟಿ, ಕೊಪ್ಪಳ ಜಿಲ್ಲಾ ಗೌರವ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಐ.ವಿ. ಪತ್ತಾರ, ಜಿಲ್ಲಾಧ್ಯಕ್ಷರಾಗಿ ಮೌನೇಶ ಬಡಿಗೇರ, ಉಪಾಧ್ಯಕ್ಷರಾಗಿ ವೀರಭದ್ರಪ್ಪ ಬಡಿಗೇರ ಹಾಗೂ ಕಾಳೇಶ್ ಬಡಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಈ.ಕೆ. ಹೊಸಮನಿ ಅವರನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೋಹನ ನರಹಗುಂದ (ಬಳ್ಳಾರಿ), ಬಳ್ಳಾರಿ–ವಿಜಯನಗರ–ಕೊಪ್ಪಳ ವಿಭಾಗದ ಅಧ್ಯಕ್ಷ ಚಂದ್ರಕಾಂತ ಸೋನಾರ, ರಾಜ್ಯ ಉಪಾಧ್ಯಕ್ಷ ಸುರೇಶ್ ಶಿಲ್ಪಿ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ರಾಮಾಚಾರ ಉಪಸ್ಥಿತರಿದ್ದರು.