ಗದಗ: ಪುಸ್ತಕಗಳಲ್ಲಿ ಅಪಾರ ಜ್ಞಾನ ಅಡಗಿದ್ದು, ಮನುಷ್ಯನ ಒಟ್ಟು ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿವೆ. ಪುಸ್ತಕದ ಹೊರತಾಗಿ ದೊರಕುವ ವಸ್ತುಗಳಿಂದ ಸಿಗುವ ಸಂತೋಷ ತಾತ್ಕಾಲಿಕವಾದುದು. ಆದರೆ ಪುಸ್ತಕದ ಓದಿನಿಂದ ದೊರೆಯುವ ಸುಖ ಶಾಶ್ವತವಾದುದು. ಮನುಷ್ಯನಲ್ಲಿ ಜೀವಪರ ಕಾಳಜಿಯನ್ನು ಇಮ್ಮಡಿಗೊಳಿಸುತ್ತವೆ. ಪುಸ್ತಕಗಳೇ ಮನುಷ್ಯನ ನಿಜವಾದ ಸಖ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ವ್ಯಕ್ತಿ ಓದುವ ಸಂಸ್ಕೃತಿಯಿಂದ ವಿಮುಖನಾಗುತ್ತಿದ್ದಾನೆ. ಬಾಲ್ಯದಲ್ಲಿಯೇ ಪುಸ್ತಕ ಪ್ರೀತಿಯನ್ನು ಬೆಳೆಸುವ ದಿಸೆಯಲ್ಲಿ ಪೋಷಕರು ಪ್ರಯತ್ನಿಸಬೇಕು. ಓದುಗರಿಗೆ ಪುಸ್ತಕಗಳು ಸುಲಭವಾಗಿ ದೊರೆಯುವ ದಿಸೆಯಲ್ಲಿ ಪುಸ್ತಕ ಪ್ರಾಧಿಕಾರ ವ್ಯವಸ್ಥೆ ಕಲ್ಪಿಸಬೇಕು. ಅತ್ತಿಮಬ್ಬೆ ಹಾಗೂ ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುವಂತಾಗಬೇಕು ಎಂದು ತಿಳಿಸಿದರು.
ಜಾಗೃತ ಸಮಿತಿಯ ಜಿಲ್ಲಾ ಸಂಚಾಲಕ ಎ.ಎಸ್. ಮಕಾನದಾರ ಮಾತನಾಡಿ, ಜಿಲ್ಲಾ ಹಂತದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆಯನ್ನು ಪುನರಾರಂಭಗೊಳಿಸಬೇಕು. ಅಲ್ಲದೇ ಲೇಖಕರ ಕೃತಿಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು. ಜಿಲ್ಲಾ ಹಂತದಲ್ಲಿ ಸಮಿತಿ ಸದಸ್ಯರು ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಈ ವೇಳೆ ಮನೆಗೊಂದು ಗ್ರಂಥಾಲಯ ಯೋಜನೆ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಆರ್.ಎಫ್. ಲೊಟಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ರವಿ ದೇವರಡ್ಡಿ, ಮಂಜುಳಾ ವೆಂಕಟೇಶಯ್ಯ, ರಾಜೇಶ್ವರಿ ಬಡ್ನಿ, ಅಂದಯ್ಯ ಅರವಟಗಿಮಠ, ಎಸ್.ಕೆ. ಆಡಿನ, ಬಸವರಾಜ ಬಡಿಗೇರ, ಸಂತೋಷ ಅಂಗಡಿ ಅವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.