ಗದಗ: ಯುವಜನೋತ್ಸವವು ಯುವಕರ ಪ್ರತಿಭೆ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಬೆಳೆಸುವ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಎಸ್.ಕೆ. ಪವಾರ ತಿಳಿಸಿದರು.
ಯುವಕರಲ್ಲಿರುವ ಹಾಡು, ನೃತ್ಯ, ನಾಟಕ, ಸಾಹಿತ್ಯ, ಚಿತ್ರಕಲೆ ಮುಂತಾದ ವಿವಿಧ ಪ್ರತಿಭೆಗಳ ಅನಾವರಣ ಮಾಡುವ ವೇದಿಕೆಯೇ ಯುವಜನೋತ್ಸವವಾಗಿದ್ದು, ದೇಶದ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಮತ್ತು ಜನಪದ ಕಲೆಗಳನ್ನು ಅರಿಯಲು ಅವಕಾಶ ದೊರೆಯುವುದರೊಂದಿಗೆ ಸಾಂಸ್ಕೃತಿಕ ಅರಿವನ್ನು ಮೂಡಿಸುತ್ತದೆ ಎಂದರು.
ಬೇರೆ ಬೇರೆ ಮಹಾವಿದ್ಯಾಲಯಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಒಟ್ಟಾಗಿ ಭಾಗವಹಿಸುವುದರಿಂದ ಸ್ನೇಹ, ಸಹಕಾರ ಮತ್ತು ಏಕತೆ ಬೆಳೆಸುತ್ತದೆ. ಶಿಸ್ತು ಮತ್ತು ಹೊಣೆಗಾರಿಕೆಗಳ ಮೂಲಕ ನಾಯಕತ್ವ ಗುಣಗಳು ಬೆಳೆಯುತ್ತವೆ. ಜತೆಗೆ ಪಠ್ಯಭಾರದಿಂದ ದೂರವಾಗಿ ಮನರಂಜನೆ ಮತ್ತು ಉತ್ಸಾಹ ಪಡೆಯಲು ಯುವಜನೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳು ಸಹಾಯಕವಾಗುತ್ತದೆ. ಮುಖ್ಯವಾಗಿ ಯುವಕರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ನೆರವಾಗಿ ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಬಲ ನೀಡಲು ಯುವಜನೋತ್ಸವ ಬಹಳಷ್ಟು ಪೂರಕವಾಗಿದೆ ಎಂದರು.ಸಂಸ್ಥೆ ಕಾರ್ಯದರ್ಶಿ ಎ.ಡಿ. ಗೋಡೆಖಂಡಿ ಮಾತನಾಡಿ, ಯುವಕರು ದೇಶದ ಶಕ್ತಿ ಮತ್ತು ಭವಿಷ್ಯದ ಆಧಾರಸ್ತಂಭ. ಹೀಗಾಗಿ ಅವರ ಶ್ರಮ, ಬುದ್ಧಿವಂತಿಕೆ ಮತ್ತು ಉತ್ಸಾಹವೇ ರಾಷ್ಟ್ರದ ಪ್ರಗತಿಗೆ ಪ್ರಮುಖ ಕಾರಣವಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಕೃಷಿ ಮತ್ತು ಉದ್ಯಮಶೀಲತೆ ಮುಂತಾದ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ತಂದು ದೇಶವನ್ನು ಮುಂದಕ್ಕೆ ಕರೆದೊಯ್ಯುತ್ತಾರೆ. ಶಿಸ್ತು, ದೇಶಪ್ರೇಮ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಅವರು ನಿಜವಾದ ಅರ್ಥದಲ್ಲಿ ದೇಶದ ಬೆನ್ನೆಲುಬಾಗುತ್ತಾರೆ ಎಂದರು.ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ ಆನಂದ್ ಪೋತ್ನಿಸ್ ವಹಿಸಿದ್ದರು. ಕೆ.ವಿ. ಕುಷ್ಟಗಿ, ಪ್ರಾ. ಪ್ರೊ. ಲಿಂಗರಾಜ ರಶ್ಮಿ, ಪ್ರೊ. ಆರ್.ಆರ್. ಕುಲಕರ್ಣಿ, ಪ್ರೊ. ಬಿ.ಪಿ. ಜೈನರ, ಪ್ರಾ. ಡಾ. ವಿ.ಟಿ. ನಾಯ್ಕರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.