ಕನ್ನಡಪ್ರಭ ವಾರ್ತೆ ದಾಂಡೇಲಿ
ನಗರದ ಹಳೆ ನಗರ ಸಭೆಯ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ನಡೆದ ನನ್ನ ಉತ್ತರ ಕನ್ನಡ; ಕಾಲು ಶತಮಾನದ ನಡಿಗೆ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಡು ಮತ್ತು ಕಡಲು ಎರಡನ್ನು ಹೊಂದಿರುವ ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಮತ್ತು ಅಭಿವೃದ್ಧಿಯ ನಡುವೆ ಹೊಂದಾಣಿಕೆ ಇಲ್ಲದ ಜ್ಞಾನದ ಯೋಜನೆಗಳಿಂದಾಗಿ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಜಾನಪದ ಬದುಕಿನ ಮೇಲೆ ವ್ಯಾಪಕ ಪರಿಣಾಮ ಬೀರತೊಡಗಿದೆ. ಬಂಡವಾಳವಾದ ಮುಖ್ಯವಾಗುವುದಕ್ಕೆ ಪ್ರಾರಂಭವಾದ ನಂತರ ನಮ್ಮ ಬದುಕುಗಳು ವಿದ್ವಾಂಸಕಾರಿಯಾಗಿ ಬದಲಾಗುತ್ತ ಹೋಗಿದೆ. ಪ್ರಶ್ನೆ ಮಾಡುವ ಮನೋಭಾವ ನಮ್ಮಲ್ಲಿ ಇಲ್ಲದೇ ಇರುವುದರಿಂದ ಅಭಿವೃದ್ಧಿ ಯೋಜನೆಗಳ ಹೆಸರಿನ ಪರಿಣಾಮವಾಗಿ ಶಿರೂರು ಗುಡ್ಡ ಕುಸಿತದಂತಹ ಘಟನೆ ನಡೆಯುವಂತಾಯಿತು. ಗಾಂಧೀಜಿಯವರ ಕುರುಹುಗಳು ನಮ್ಮ ನೆಲದ ಮೂಲೆ ಮೂಲೆಯಲ್ಲಿದೆ. ಗುಡ್ಡ ಕುಸಿತವಾಗಿರುವುದು ಕಣ್ಣಿಗೆ ಬೀಳುತ್ತದೆ ಆದರೆ ಮನುಷ್ಯನ ವಿವೇಕ ಕುಸಿಯುತ್ತಿರುವುದು ಕಣ್ಣಿಗೆ ಬೀಳುವುದಿಲ್ಲ. ಅದು ಅರಿವಿಗೆ ಬರುವಾಗ ಏನೇನು ಉಳಿಯುವುದಿಲ್ಲ, ಅಂದರೆ ನಮ್ಮ ಜಿಲ್ಲೆ ಸರ್ವನಾಶದ ಅಂಚಿನಲ್ಲಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಸ್ಥಳೀಯ ಚಿಂತನೆ ಮತ್ತು ಕೌಶಲ್ಯ ರೂಪಿಸಿಕೊಳ್ಳಬೇಕಾಗಿದೆ. ಇಲ್ಲದೆ ಹೋದಲ್ಲಿ ನಾಳೆ ಎನ್ನುವುದು ಬತ್ತಿ ಹೋಗಲಿದೆ. ಉತ್ಸಾಹ ಕಳೆದುಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚೆತ್ತುಕೊಂಡು ಜಾಗೃತರಾಗಬೇಕಾಗಿದೆ ಎಂದು ಕರೆ ನೀಡಿದರು.ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ರೆಡಿಮೇಡ್ ಶರ್ಟ್ ಇದ್ದಂತೆ. ಉತ್ತರ ಕನ್ನಡ ಜಿಲ್ಲೆ ಎಂದರೇ ಹಸಿರು, ಇಲ್ಲಿ ಹಸಿರೆ ಬಂಗಾರ. ದಟ್ಟವಾದ ಕಾಡು, ನದಿ, ಸಮುದ್ರ, ಬೆಟ್ಟ ಗುಡ್ಡಗಳನ್ನು ಹೊಂದಿರುವ ಜಿಲ್ಲೆ ನಮ್ಮದು. ಈ ಜಿಲ್ಲೆಯ ಜನತೆಯ ಜ್ಞಾನಕ್ಕೆ ಬೆಲೆ ಇಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ. ಅದರ ಪರಿಣಾಮವಾಗಿ ಇಂದು ಸ್ಥಳೀಯ ಪರಿಸರವನ್ನು ಅರ್ಥಮಾಡಿಕೊಳ್ಳದೆ ಯೋಜನೆ, ಕಾಮಗಾರಿಗಳನ್ನು ಅನುಷ್ಠಾನ ಪಡಿಸಿದ ಪರಿಣಾಮವಾಗಿ ಶಿರೂರು, ಕಳಚೆ ಗುಡ್ಡ ಕುಸಿತದಂತ ಘಟನೆ ನಡೆಯುವಂತಾಯಿತು. ಸಮುದ್ರದ ಅಂಚಿನಲ್ಲಿದ್ದು ಮೀನುಗಾರಿಕೆಯ ಮೂಲಕ ಜೀವನ ಮಾಡುತ್ತಿದ್ದ ಜನರನ್ನು ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳಾಂತರಿಸಿ ಮೀನು ಖರೀದಿಸುವವರನ್ನಾಗಿಸಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯ ಜನತೆ ಬದುಕು ಕಳೆದುಕೊಂಡರು, ಇತ್ತ ಉದ್ಯೋಗ ಕಳೆದುಕೊಂಡರು. ಬೆವರು ಸುರಿಸಿ ದುಡಿಯುವ ಅವಕಾಶವೂ ಇಲ್ಲದಾಯಿತು. ಇಂತಹ ಸಾವಿರಾರು ಸಮಸ್ಯೆಗಳ ಸಂದಿಗ್ದ ಪರಿಸ್ಥಿತಿಯಲ್ಲಿ ಇಂದು ಉತ್ತರ ಕನ್ನಡ ಜಿಲ್ಲೆಯಿದೆ. ಈ ಬಗ್ಗೆ ಚಿಂತನೆ ಮತ್ತು ಜಾಗೃತಿಯ ಅನಿವಾರ್ಯತೆ ಇದೆ ಎಂದರು.
ಲೇಖಕಿ ದೀಪಾ ಹಿರೇಗುತ್ತಿ ಸಮುದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯ ಕುರಿತು ಮಾತನಾಡಿ, ಬಹುಭಾಷಿಗರು ಹಾಗೂ ಬಹುಧರ್ಮಿಯರು ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಸ್ಕೃತಿಕ ಅನ್ಯೂನ್ಯತೆಯ ಸೊಗಡಿದೆ. ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ನಾಡಿಗೆ ಮಾದರಿ ಎಂದರು.ಚಿಂತಕ ಯಲ್ಲಾಪುರದ ರಾಮಕೃಷ್ಣ ದುಂಡಿ ಆಶಯ ನುಡಿಗಳನ್ನಾಡಿದರು.
ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಹಿರಿಯ ವೈದ್ಯ ಡಾ. ಎಸ್.ಎಲ್. ಕರ್ಕಿ, ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ದೀಪಕ ನಾಯಕ, ನಿವೃತ್ತ ಶಿಕ್ಷಕ ಸುರೇಶ ನಾಯಕ, ಹಳಿಯಾಳದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಜಿ.ಡಿ.ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.ಉಲ್ಲಾಸ ಹುದ್ದಾರ ಸ್ವಾಗತಿಸಿದರು. ಸಂದೇಶ್ ಎಸ್. ಜೈನ್ ಮತ್ತು ಶಿಕ್ಷಕಿ ನಂದಿನಿ ನಾಯ್ಕ ನಿರೂಪಿಸಿದರು.
ಶಿಕ್ಷಕ ಸುಭಾಷ ನಾಯಕ ವಂದಿಸಿದರು.