ಕನ್ನಡಪ್ರಭ ವಾರ್ತೆ ಮಂಡ್ಯ
ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿಲ್ಲ. ಅವರೆಲ್ಲರೂ ಖುಷಿಯಾಗಿಯೇ ಇದ್ದಾರೆ. ಕಾಂಗ್ರೆಸ್ ಆಡಳಿತದ ಬಗ್ಗೆ ಬಿಜೆಪಿಗೆ ಆಕ್ರೋಶವಿದೆಯೇ ಹೊರತು ಜನಾಕ್ರೋಶವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ಬುಧವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಜನರು ಸಂತಸದಿಂದ ಇದ್ದಾರೆ. ಸಿದ್ದರಾಮಯ್ಯ ಸಮತೋಲನ ಬಜೆಟ್ ನೀಡಿದ್ದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿದೆ. ಮಹಾರಾಷ್ಟ್ರ, ಗುಜರಾತ್ ನಂತರ ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ ರಾಷ್ಟ್ರದ ಗಮನ ಸೆಳೆದಿದೆ. ಜಿಎಸ್‌ಟಿ ಪಾವತಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಅಲ್ಲಿಗೆ ರಾಜ್ಯದ ಆರ್ಥಿಕ ಸ್ಥಿತಿಯೂ ಸುಭದ್ರವಾಗಿದೆ. ಇದರ ನಡುವೆಯೂ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಕಂಡು ಬಿಜೆಪಿ-ಜೆಡಿಎಸ್‌ನವರು ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಜನರ ದಿಕ್ಕು ತಪ್ಪಿಸಲು ಹೋರಾಟ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಬೆಲೆ ಏರಿಕೆ ಜನರಿಗೆ ಹೊರೆಯಾಗಿದೆ ಎಂದು ನನಗಿಸುತ್ತಿಲ್ಲ. ಏಕೆಂದರೆ ಬಜೆಟ್ ಗಾತ್ರ ಹೆಚ್ಚಿದಂತೆ ತೆರಿಗೆ ಹೆಚ್ಚಿಸುವುದು ಸಹಜ ಪ್ರಕ್ರಿಯೆ. ಕಳೆದ ವರ್ಷ ರಾಜ್ಯ ಬಜೆಟ್‌ನ ಗಾತ್ರ ೩.೭೧ಲಕ್ಷ ಕೋಟಿ ರು. ಇತ್ತು. ಈ ವರ್ಷ ೪.೯ ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿದೆ. ಬಜೆಟ್‌ನ ಗಾತ್ರ ಶೇ.೩೦ರಷ್ಟು ಹೆಚ್ಚಳವಾಗಿರುವುದರಿಂದ ತೆರಿಗೆ ವಿಧಿಸುವುದಕ್ಕೆ ಅವಕಾಶವಿದೆ. ಅದರಂತೆ ಬೆಲೆ ಏರಿಕೆ ಮಾಡಿದ್ದೇವೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.ಬಿಜೆಪಿ-ಜೆಡಿಎಸ್ ಪ್ರತಿಭಟನೆ ಮಾಡುವುದು ವಿಪರ್ಯಾಸ. ದೇಶದಲ್ಲಿ ತೆರಿಗೆ ಹೆಚ್ಚಾಗಿದ್ದರಿಂದ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್, ಪೆಟ್ರೋಲ್-ಡೀಸೆಲ್ ಹೆಚ್ಚಳ ಮಾಡಿದ್ದು ಬಿಜೆಪಿಯವರಿಗೆ ಕಾಣೋಲ್ವಾ, ಕೇಂದ್ರದ ನಡೆಯಿಂದ ಎಲ್ಲಾ ಬೆಲೆ ಏರಿಕೆಯಾಗಿದೆ ಎಂದು ದೂಷಿಸಿದರು.
ಕೇಂದ್ರ ಸರ್ಕಾರ ಕೂಡ ನಮಗೆ ತೆರಿಗೆ ಹಣದಲ್ಲಿ ನಿರೀಕ್ಷಿತ ಪಾಲನ್ನು ಕೊಡಲಿಲ್ಲ. ಭದ್ರಾ ಯೋಜನೆಗೆ ೫೩೦೦ ಕೋಟಿ ರು. ಕೊಟ್ಟಿಲ್ಲ. ೨೦ ಸಾವಿರ ಕೋಟಿ ರು. ಜಿಎಸ್‌ಟಿ ಹಣದಲ್ಲಿ ೩ ರಿಂದ ೪ ಸಾವಿರ ಕೋಟಿ ರು. ಮಾತ್ರ ಕೊಟ್ಟರು. ಹೀಗಾಗಿ ಜನರಿಂದ ತೆರಿಗೆ ಹಣ ತೆಗೆಯಲು ಮುಂದಾಗಿದ್ದೇವೆ. ರಾಜ್ಯದ ಬೆಲೆ ಏರಿಕೆ ಬಗ್ಗೆ ಜನಾಕ್ರೋಶ ಯಾತ್ರೆ ನಡೆಸುವವರು ಕೇಂದ್ರ ಸರ್ಕಾರ ಅಡುಗೆ ಅನಿಲಕ್ಕೆ ೫೦ ರು. ಹಚ್ಚಿಸಿರುವುದಕ್ಕೆ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.ಬೆಲೆ ಏರಿಕೆ ನಡುವೆಯೂ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಹಾವೇರಿಯ ಶಿಗ್ಗಾವಿ ಮತ್ತು ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿಗಳ ಪುತ್ರರೇ ಸ್ಪರ್ಧಿಸಿದ್ದರೂ ಜನರು ಕಾಂಗ್ರೆಸ್ ಪಕ್ಷದ ಕೈಹಿಡಿದರು. ಇದನ್ನು ನೋಡಿದಾಗ ಜನರು ಕಾಂಗ್ರೆಸ್ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಎಲ್ಲಾ ಯೋಜನೆಗಳಿಗೂ ಹಣ ಒದಗಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಎಷ್ಟೋ ಮಹಿಳೆಯರು ಗೃಹಲಕ್ಷ್ಮೀ ಹಣದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯದ ಜೊತೆಗೆ ಆರ್ಥಿಕ ಶಕ್ತಿಯನ್ನೂ ನೀಡಿದ್ದೇವೆ ಎಂದರು.ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯನ್ನು ಜೆಡಿಎಸ್ ಬೆಂಬಲಿಸುತ್ತಿಲ್ಲ. ಇಬ್ಬರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ನೋಡಿದರೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಇರುವಂತೆ ಕಾಣುತ್ತಿದೆ. ಬಿಜೆಪಿ ಸಂಸದರು ಕೇಂದ್ರದ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ಹೀಗೆ ಒಳ್ಳೆಯ ಆಡಳಿತ ನೀಡಿದರೂ ಟೀಕೆಗಳು ಸಾಮಾನ್ಯ. ಅವುಗಳನ್ನು ಗಂಭೀರವಾಗಿ ಪರಿಗಣಿಸದೆ ಕಾಂಗ್ರೆಸ್ ಉತ್ತಮ ಆಡಳಿತ ನೀಡುವುದನ್ನು ಗುರಿಯಾಗಿಸಿಕೊಂಡಿದೆ ಎಂದರು.
ಗೋಷ್ಠಿಯಲ್ಲಿ ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪಿ.ಚಿದಂಬರಂ, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ರುದ್ರಪ್ಪ, ಹಾಲಹಳ್ಳಿ ರಾಮಲಿಂಗಯ್ಯ ಇತರರಿದ್ದರು.