ಹಳಿಯಾಳ: ಅಗತ್ಯ ದಿನಬಳಕೆ ವಸ್ತುಗಳ ಬೆಲೆಯನ್ನು ಏರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕದಿಂದ ಬುಧವಾರ ಹಳಿಯಾಳ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ, ಗ್ಯಾರಂಟಿ ಯೋಜನೆಗಳು ಹಾಗೂ ಭಾಗ್ಯಗಳ ಮೂಲಕ ಮತದಾರರಿಗೆ ಮರಳು ಮಾಡಿರುವ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಬರೆ ಇಡಲಾರಂಭಿಸಿದೆ. ಬೆಲೆ ಏರಿಕೆಯ ಜೊತೆಯಲ್ಲಿ ತೆರಿಗೆಯನ್ನು ದುಪ್ಪಟ್ಟು ಮಾಡಿರುವ ಈ ರಾಜ್ಯ ಸರ್ಕಾರ ಮೊದಲು ಅಧಿಕಾರದಿಂದ ಇಳಿಯಬೇಕು ಎಂದು ಆಗ್ರಹಿಸಿದರು.
ಮಾಜಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ದಿಸೆಯಲ್ಲಿ ಸರ್ಕಾರ ಸಂಪೂರ್ಣ ಖಜಾನೆ ಖಾಲಿ ಮಾಡಿದೆ. ಈ ಸರ್ಕಾರದಲ್ಲಿ ಅಲ್ಕೋಹಾಲ್ ಮತ್ತು ಹಾಲಿನ ದರವು ಹೆಚ್ಚಾಗಿದೆ. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಮಾಡಿದ ಕಾಮಗಾರಿಗಳ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣವಿಲ್ಲವಾಗಿದೆ ಎಂದರು.ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬೆನ್ನೆಲುಬು ಮುರಿಯುವ ಕಾರ್ಯವನ್ನು ಮಾಡುತ್ತಿದೆ. ಈ ಸರ್ಕಾರ ಕಣ್ಣು, ಕಿವಿ ಇಲ್ಲದ ಹಾಗೇ ವರ್ತಿಸುತ್ತಿದೆ. ಹಳಿಯಾಳ ತಾಲೂಕಿನ ಗ್ರಾಮಾಂತರ ಭಾಗ ಮತ್ತು ಪಟ್ಟಣದಲ್ಲಿ ಜೀವಜಲದ ಸಮಸ್ಯೆ ಎದುರಾಗಿದೆ. ಅತ್ತ ದಶಕಗಳು ಕಳೆದರೂ ಕಾಳಿನದಿ ನೀರಾವರಿ ಯೋಜನೆಯೂ ಮುಕ್ತಾಯದ ಲಕ್ಷಣಗಳು ಕಂಡು ಬರುತ್ತಿಲ್ಲ. ಸ್ಥಳೀಯ ಶಾಸಕರು ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಯಾವ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.