ಕನ್ನಡಪ್ರಭ ವಾರ್ತೆ ರಾಯಚೂರು
ಮಂತ್ರಾಲಯದ ಶ್ರೀರಾಯರ ಮಠದಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮಠದಲ್ಲಿ ವಿಧಿವಿಧಾನಗಳನ್ನು ಅನುಸರಿಸಿ ಘಟ ಸ್ಥಾಪನೆಯನ್ನು ನೆರವೇರಿಸಿದರು. ನವರಾತ್ರಿ ಉತ್ಸವದ ಶುಭಾರಂಭದ ಪ್ರಯುಕ್ತ ಶ್ರೀಮಠದಲ್ಲಿ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ (ಎಸ್ಜಿಎಸ್ ವಿದ್ಯಾಪೀಠ) ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಂದ ಪ್ರವಚನಗಳು, ಜ್ಞಾನಕಾರ್ಯ ಮತ್ತು ವೇದ ಪಾರಾಯಣ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಶುಭ ಸಂದರ್ಭದಲ್ಲಿ ಸುಕ್ಷೇತ್ರದ ಗ್ರಾಮದೇವತೆ ಶ್ರೀಮಂಚಾಲಮ್ಮ ದೇವಿ ಹಾಗೂ ಸನ್ನಿಧಿಯನ್ನು ವೀಳ್ಯದೆಲೆಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ನಗರದ ಬ್ರೇಸ್ತವಾರಪೇಟೆ ಉಪ್ಪರವಾಡಿಯ ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ 55 ನೇ ನವರಾತ್ರೋತ್ಸವ ಅದೇ ರೀತಿ ಕಿಲ್ಲೇಬೃಹನ್ಮಠದಲ್ಲಿ ಶರನ್ನವ ರಾತ್ರಿ ಹಾಗೂ ನಾಡಹಬ್ಬ ದಸರಾ ಅಂಗವಾಗಿ 88ನೇ ವರ್ಷದ ಶ್ರೀದೇವಿ ಮಹಾಪುರಾಣ ಪ್ರವಚನ ತಾಲೂಕಿನ ಮಮದಾಪುರ ಗ್ರಾಮದಲ್ಲಿರುವ ಗಧಾರ್ ಮಾರಿಕಾಂಭ ದೇವಸ್ಥಾನದಲ್ಲಿ 13ನೇ ವೈಭವದ ಶರನ್ನವರಾತ್ರಿ ಹಾಗೂ ಸ್ಥಳೀಯ ಗೌಳಿ ಸಮಾಜದ ನವರಾತ್ರಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿರುವ 44 ನೇ ವರ್ಷದ ಶರನವರಾತ್ರಿ ಘಟಸ್ಥಾಪನೆ, ಕಿಲ್ಲೇಬೃಹನ್ಮಠದಿಂದ ಅಂಬಾ ಭವಾನಿ ಮೂರ್ತಿಯ ಮೆರವಣಿಗೆಯನ್ನು ನಡೆಸಿ, ಬ್ರೇಸ್ತವಾರ ಪೇಟೆ ನಿರ್ಮಿಸಿರುವ ಶಕ್ತಿ ಮಂದಿರದಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಯಿತು.ದಸರಾ ವೈಭವ ಸೇರಿದಂತೆ ಜಿಲ್ಲೆ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿರುವ ಮಠ-ಮಾನ್ಯಗಳು, ವಿವಿಧ ಅವತಾರಗಳಡಿ ಕರೆಯಲ್ಪಡುವ ದುರ್ಗಾ ಮಾತೆಯ ಗುಡಿ,ದೇವಸ್ಥಾನ ಹಾಗೂ ಛತ್ರಗಳಲ್ಲಿ ನವರಾತ್ರೋತ್ಸವ, ಅಲಂಕಾರ ಸೇವೆ, ವಿಶೇಷ ಪೂಜೆ ಪುನಸ್ಕಾರ, ದೇವಿ ಪುರಾಣ, ಪ್ರವಚನಗಳು ಜರುಗಿದವು. ಅದೇ ರೀತಿ ದೇವಿ ಮಂದಿರದಲ್ಲಿ ಸಂಜೆ ವಿಶೇಷ ಪೂಜೆ, ದಾಂದಿಯಾ ನೃತ್ಯ, ಮೆರವಣಿಗೆ, ಪಲ್ಲಕ್ಕಿ ಉತ್ಸವಗಳು, ಅನ್ನಪ್ರಸಾದದ ಸೇವೆ ಮೊದಲ ದಿನದ ನವರಾತ್ರಿಯ ಸಂಭ್ರಮವನ್ನು ಹೆಚ್ಚಿಸುವಂತೆ ಮಾಡಿತು.