ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಧಿಕಾರಿ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಮುಂಗಾರು ಹಂಗಾಮಿಗಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ವಿತರಣೆ, ದಾಸ್ತಾನಿಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡಬೇಕು. ರೈತರಿಗೆ ಅಗತ್ಯ ಬಿತ್ತನೆ ಬೀಜಗಳು ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಬಿತ್ತನೆ ಬೀಜ ಮಾರಾಟ ಕೇಂದ್ರಗಳಲ್ಲಿ ಬೀಜಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಮೇ 20 ರಿಂದ ಬಿತ್ತನೆ ಬೀಜಗಳ ವಿತರಣೆ ಪ್ರಾರಂಭಿಸಲಾಗುತ್ತಿದ್ದು, ರೈತರಿಗೆ ಗುಣಮಟ್ಟದ ಬೀಜ ಒದಗಿಸುವ ದೃಷ್ಟಿಯಿಂದ ವಿತರಣೆಗೆ ಮುನ್ನ ಪ್ರತಿಯೊಂದು ಕೇಂದ್ರದಲ್ಲಿಯೂ ಬೀಜದ ತಳಿ ಹಾಗೂ ಪ್ರತಿ ಲಾಟ್‌ನಿಂದ ಬಿತ್ತನೆ ಬೀಜಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಂಡ ನಂತರ ವಿತರಣೆ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.
ರೈತ ಮುಖಂಡ ಆರಾಧ್ಯ ಮಾತನಾಡಿ ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ. ಜೊತೆಗೆ ರೈತರಿಗೆ ಬ್ಯಾಂಕುಗಳಲ್ಲಿ ತ್ವರಿತವಾಗಿ ಸಾಲ ಲಭ್ಯವಾಗದ ಕಾರಣ ಅವರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ರೈತರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಜೊತೆಗೆ ರೈತರಿಗೆ ಸಾಕಷ್ಟು ಸಮಸ್ಯೆಗಳಿದ್ದು ಅವುಗಳನ್ನು ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಈ ಬಗ್ಗೆಯೂ ಸಹ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿ ರೈತರಿಗೆ ನ್ಯಾಯ ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ, ತುಮಕೂರು ಉಪ ಕೃಷಿ ನಿರ್ದೇಶಕ ಹುಲಿರಾಜ್, ಮಧುಗಿರಿ ಉಪ ಕೃಷಿ ನಿರ್ದೇಶಕ ಚಂದ್ರಕುಮಾರ್ ಎಚ್.ಎಲ್, ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿವಿಧ ರೈತ ಮುಖಂಡರು ಉಪಸ್ಥಿತರಿದ್ದರು.