ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!

KannadaprabhaNewsNetwork |  
Published : Sep 10, 2025, 01:03 AM IST
ಸಿಕೆಬಿ-2 ಮತ್ತು 3  ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಕೇಳೋರಿಲ್ಲದೆ, ಖರೀದಿ ಮಾಡೋವರಿಲ್ಲದೆ ಎಲ್ಲಂದರಲ್ಲಿ ಬಿಸಾಡಿ ಹೋಗಿದ್ದಾರೆ | Kannada Prabha

ಸಾರಾಂಶ

ರಾಜ್ಯದಲ್ಲಿ ಮಳೆ ಮತ್ತಿತರ ಕಾರಣದಿಂದ ವಿವಿಧ ಬೆಳೆಗಳು ಧರೆಗೆ ಇಳಿದಿವೆ. ಮಳೆಯಿಂದ ಹೂ, ಪಚ್ಚ ಬಾಳೆ, ಈರುಳ್ಳಿಯನ್ನು ಕೇಳುವವರೇ ಇಲ್ಲದಂತಾಗಿ ರೈತರು ಕಂಗಾಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮಳೆ ಮತ್ತಿತರ ಕಾರಣದಿಂದ ವಿವಿಧ ಬೆಳೆಗಳು ಧರೆಗೆ ಇಳಿದಿವೆ. ಮಳೆಯಿಂದ ಹೂ, ಪಚ್ಚ ಬಾಳೆ, ಈರುಳ್ಳಿಯನ್ನು ಕೇಳುವವರೇ ಇಲ್ಲದಂತಾಗಿ ರೈತರು ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರ ರೈತರು ಹಗಲು ರಾತ್ರಿ ಎನ್ನದೆ ಹೂಗಳನ್ನು ಬೆಳೆದಿದ್ದಾರೆ. ಆದರೆ ಮಳೆಯಿಂದಾಗಿ ಒದ್ದೆಯಾದ ಹೂಗಳು ಬೆಳಗಾರರ ಬದುಕಿಗೆ ಬರೆ ಹಾಕಿದಂತಾಗಿದೆ. ರಾಶಿ ಹೂಗಳು ಬಿಕರಿಯಾಗದ ಕಾರಣ ಹೂ ಬೆಳೆಗಾರರು ಸುಖಾಸುಮ್ಮನೆ ಮಾರುಕಟ್ಟೆಯಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. 1 ಕೇಜಿಗೆ ಚೆಂಡು ಹೂ ₹1, ಸೇವಂತಿ ಹೂ ₹10, ಗುಲಾಬಿ ₹10ಕ್ಕೆ ಕುಸಿತ ಕಂಡಿದೆ.

ಇನ್ನು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಪಚ್ಚ ಬಾಳೆ ಹಣ್ಣಿನ ಬೆಲೆ ಪಾತಾಳಕ್ಕಿಳಿದಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಅನ್ನದಾತನ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ. ತಾಲೂಕಿನ ಎಲ್ಲೆ ಮಾಳ ಗ್ರಾಮದ ರೈತ ಕುಮಾರಸ್ವಾಮಿ 5 ಎಕರೆ ಜಮೀನಿನಲ್ಲಿ 4000 ಪಚ್ಚ ಬಾಳೆ ಗಿಡಗಳನ್ನು ಬೆಳೆದಿದ್ದಾರೆ. ಕಟಾವಿಗೆ ಬಂದಿದ್ದ ಬಾಳೆಯನ್ನು ಕೇಳುವವರು ಇಲ್ಲದಂತಾಗಿ ಜಮೀನಿನಲ್ಲಿಯೇ ಬಾಳೆಹಣ್ಣು ಗೊನೆಗಳಲ್ಲೇ ಕೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ₹4-5 ಲಕ್ಷ ವೆಚ್ಚದಲ್ಲಿ ಬಾಳೆ ಬೆಳೆದಿದ್ದು, ಕೊಳೆಯುತ್ತಿರುವ ಬಾಳೆ ಫಸಲನ್ನು ನೋಡಲಾಗದೆ ರೋಟವೇಟರ್ ಯಂತ್ರದಿಂದ ಬಾಳೆ ಫಸಲನ್ನು ಉಳುಮೆ ಮಾಡಲು ರೈತ ಮುಂದಾಗಿದ್ದಾನೆ.

ಕೊಪ್ಪಳದಲ್ಲಿ ಈರುಳ್ಳಿ ಬೆಳೆ ಕುಸಿತವಾಗಿದ್ದು ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಪರಿಣಾಮ ಕಟಾವಿಗೆ ಬಂದಿದ್ದ 3 ಎಕರೆ ಬೆಳೆಯಲ್ಲಿ ಕುರಿ ಮೇಯಿಸುತ್ತಿದ್ದಾರೆ. ಬೆಳೂರು ಗ್ರಾಮದ ರೈತ ದೇವಪ್ಪ ಕುರುಬರ ಬೆಳೆದ ಈರುಳ್ಳಿ ಎರಡು ಲೋಡ್‌ ಆಗುತ್ತದೆ. ಆದರೆ, ಇದನ್ನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮೈಮೇಲೆ ಖರ್ಚು ಬೀಳುತ್ತದೆ ಎಂದು ಕುರಿಗಾರರಿಗೆ ಮೇಯಿಸಿಕೊಂಡು ಹೋಗುವಂತೆ ಹೇಳಿದ್ದಾರೆ.

PREV

Recommended Stories

ಅಕ್ಕಿ ಅಕ್ರಮ ಹಗರಣ: ಸತ್ತವರಿಗೂ ಅನ್ನಭಾಗ್ಯ !
ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು