ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರಸಭೆ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.ನಗರದ ೨, ೩ ಹಾಗೂ 10ನೇ ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಸಮಸ್ಯೆ ಕಾಣಿಸುತ್ತಿವೆ. ಜೊತೆಗೆ ಚರಂಡಿಗಳಲ್ಲಿ ತಾಜ್ಯ ವಸ್ತುಗಳು ಕಟ್ಟಿಕೊಂಡು ಗಲೀಜು ನೀರು ಹೆಚ್ಚುತ್ತಿದೆ. ಹಾಗಾಗಿ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ನಗರಸಭೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸ್ವಚ್ಛತೆ ಮತ್ತು ಅಭಿವೃದ್ಧಿಯ ಬಗ್ಗೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಯುಜಿಡಿ ಯೋಜನೆಗೆ ಈಗಾಗಲೇ ೪೦ ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಯುಜಿಡಿಗೆ ಮಿಕ್ಕಂತೆ ನಗರದ ಅಭಿವೃದ್ಧಿಗೆ ಪೂರಕವಾಗಿ ವೇಗವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ವೇಳೆ ಸ್ಮಶಾನದ ಕೊರತೆ, ಅಲ್ಲಿಗೆ ಬೇಕಾಗಿರುವ ಮೂಲ ಸೌಕರ್ಯಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಮಂಗಳವಾರಪೇಟೆಯಲ್ಲಿ ಮುಖಂಡರ ಜೊತೆ ಚರ್ಚಿಸಿದ ಯೋಗೇಶ್ವರ್ ಅವರು ಇದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ವೇ ಮೂಲಕ ಇದರ ಸಮಸ್ಯೆಯನ್ನು ಬಗೆಹರಿಸಲು ಸೂಚಿಸುವುದಾಗಿ ತಿಳಿಸಿದರು.ಸಾತನೂರು ರಸ್ತೆಯನ್ನು ಅಗಲೀಕರಣಗೊಳಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಹಾಗೂ ಡಾಂಬರೀಕರಣಕ್ಕೆ ೧೧ ಕೋಟಿ ರು. ಹಣ ಬಿಡುಗಡೆಯಾಗಿದೆ. ಅತೀ ಶೀಘ್ರವಾಗಿ ಅದಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಉಪಾಧ್ಯಕ್ಷ ಲೋಕೇಶ್, ಸದಸ್ಯರಾದ ರೇವಣ್ಣ. ಸತೀಶ್ ಬಾಬು, ಜಯಮಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಅರ್.ಪ್ರಮೋದ್, ನಗರ ಸುನೀಲ್ ಕುಮಾರ್, ನಾಮಿನಿ ಸದಸ್ಯ ತಿಮ್ಮರಾಜು(ಎಂಟಿಆರ್) ಪ್ರಚಾರಸಮಿತಿ ಅಧ್ಯಕ್ಷ ಚೇತನ್ ಕೀಕರ್, ನಗರಸಭೆ ಮಾಜಿ ಅಧ್ಯಕ್ಷ ಮುದ್ದು ಕೃಷ್ಣೇಗೌಡ, ಪೌರಾಯುಕ್ತ ಮಹೇಂದ್ರ ಇತರರಿದ್ದರು.