ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದ ಸತ್ಯಾಸತ್ಯತೆ ತಿಳಿಯುವ ಸಂಬಂಧ ಪ್ರತಿಪಕ್ಷ ಬಿಜೆಪಿಯು ಏಳು ಮಂದಿ ಮುಖಂಡರನ್ನು ಒಳಗೊಂಡ ತಂಡ ರಚಿಸಿದೆ.ಈ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ತೆರಳಿ ಒಂದು ವಾರದೊಳಗೆ ಸಮಗ್ರ ವರದಿ ನೀಡಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚಿಸಿದ್ದಾರೆ.
ಪಕ್ಷದ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ನಿವೃತ್ತ ಐಪಿಎಸ್ ಅಧಿಕಾರಿ ಎಂ.ಭಾಸ್ಕರ್‌ರಾವ್, ವಕ್ತಾರ ವೆಂಕಟೇಶ್ ದೊಡ್ಡೇರಿ, ಮಂಡ್ಯ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಕುಮಾರ್, ಮುಖಂಡರಾದ ಎಸ್.ಪಿ.ಸ್ವಾಮಿಗೌಡ ಹಾಗೂ ವಿಜಯಪ್ರಸಾದ್ ಅವರು ತಂಡದಲ್ಲಿ ಇದ್ದಾರೆ.ಮದ್ದೂರಿನಲ್ಲಿ ಇಂದು 28 ಗಣೇಶ ಮೂರ್ತಿ ವಿಸರ್ಜನೆಮದ್ದೂರಿನಲ್ಲಿ ಬುಧವಾರ ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನೆಯಲ್ಲಿ ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿರುವ 28 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.ಈ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖಂಡರಾದ ಸಿ.ಟಿ.ರವಿ, ಮಾಜಿ ಸಂಸದ ಪ್ರತಾಪ್‌ಸಿಂಹ, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದ ಬಳಿಯಿಂದ ಡೊಳ್ಳು ಕುಣಿತ, ಪೂಜಾಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಲಿದೆ. ಅಲ್ಲಿಂದ ಹೊರಟ ಮೆರವಣಿಗೆ ಮದ್ದೂರು ಪುರಸಭೆ ಉದ್ಯಾನದ ಬಳಿ ಸಮಾವೇಶಗೊಳ್ಳಲಿದೆ. ಅಲ್ಲಿ ಬಿಜೆಪಿ ನಾಯಕರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ, ಪೇಟೆ ಬೀದಿ, ಎಂ.ಸಿ.ರಸ್ತೆ, ಕೊಲ್ಲಿ ಸರ್ಕಲ್ ಮೂಲಕ ಹೊಳೆ ಆಂಜನೇಯಸ್ವಾಮಿ ಬಳಿ ಎಲ್ಲಾ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು.ಚಲುವ ನೇತೃತ್ವದ ಶಾಂತಿ ಸಭೆಗೆ ಬಿಜೆಪಿ, ಹಿಂದೂಪರ ಸಂಘಗಳ ಗೈರು:ಮದ್ದೂರು ಗಲಾಟೆ ಹಾಗೂ ಬುಧವಾರ ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಶಾಂತಿ ಸಭೆ ನಡೆಯಿತು. ಮದ್ದೂರಿನ ಖಾಸಗಿ ಕಲ್ಯಾಣಮಂಟಪದಲ್ಲಿ ನಡೆದ ಸಭೆಗೆ ಬಿಜೆಪಿ, ಹಿಂದೂಪರ ಸಂಘಗಳ ಮುಖಂಡರು ಗೈರಾಗಿದ್ದರು. ಸಭೆಯಲ್ಲಿ ಮಾತನಾಡಿದ ಸಚಿವರು, ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸಲ್ಮಾನರು ದೂರ ಇರುವುದು ಒಳ್ಳೆಯದು. ಪ್ರಚೋದನೆ ನೀಡುವವರನ್ನೂ ಪೊಲೀಸರಿಗೆ ಹಿಡಿದುಕೊಡಿ ಎಂದು ಸಲಹೆ ನೀಡಿದರು. ನಾಗಮಂಗಲದಲ್ಲಿ ಈ ಬಾರಿ ಗಣೇಶೋತ್ಸವ ಸಮಯದಲ್ಲಿ ಮುಸ್ಲಿಮರು ಅರ್ಧದಿನ ಅಂಗಡಿ ಮುಂಗಟ್ಟುಗಳನ್ನೇ ಮುಚ್ಚಿದ್ದರು. ಇದರಿಂದ ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆಯಿತು. ಅದೇ ರೀತಿ ಮದ್ದೂರಿನಲ್ಲಿರುವ ಮುಸಲ್ಮಾನರೂ ಬುಧವಾರದ ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಸಹಕರಿಸಬೇಕು. ಯಾರಾದರೂ ಪ್ರಚೋದನೆ ನೀಡಲು ಮುಂದಾದರೆ, ಪ್ರಚೋದನೆ ನೀಡಲು ಬರುವವರನ್ನೂ ನೀವೇ ಪೊಲೀಸರಿಗೆ ಹಿಡಿದುಕೊಡಿ ಎಂದು ಸೂಚಿಸಿದರು.++=ಈ ಮಧ್ಯೆ, ಸಭೆಗೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್, ಉಸ್ತುವಾರಿ ಸಚಿವರು ಒಂದೆರೆಡು ಕಲ್ಲೆಸೆದಿದ್ದಾರೆ ಅಂತಾರೆ. ಗೃಹ ಸಚಿವರು ಇದೊಂದು ಸಣ್ಣ ಘಟನೆ ಅಂತಾರೆ. ಘಟನೆ ನಡೆಯದಂತೆ ತಡೆಗಟ್ಟಬೇಕಿತ್ತು. ಈಗ ಸಭೆ ಮಾಡಿ ಏನು ಪ್ರಯೋಜನ?. ಹಾಗಾಗಿ ಸಚಿವರು ಕರೆದಿರುವ ಶಾಂತಿಸಭೆಗೆ ಹೋಗಿಲ್ಲ ಎಂದರು.