ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಕೋದಂಡರಾಮ್ ಮಾತನಾಡಿ, ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆ ಪ್ರಾಚೀನ ಮತ್ತು ಅನನ್ಯತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕನ್ನಡ ಸಾಹಿತ್ಯವು ಭಾಷಾ ವೈಭವದೊಂದಿಗೆ, ಕನ್ನಡ ನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಭಾವಗೀತೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಸಮೃದ್ಧವಾಗಿದೆ ಎಂದರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಓದು ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗಬಾರದು. ವಿದ್ಯಾರ್ಥಿಗಳು ಕನ್ನಡ ಕಾವ್ಯದ ರಸವನ್ನು ಗ್ರಹಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಾಹಿತ್ಯದ ಓದು ಜೀವನಕ್ಕೆ ಬಹಳ ಮುಖ್ಯ. ಸಾಹಿತ್ಯದಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಶಿಕ್ಷಕರು, ಪೋಷಕರು ಮಹತ್ವದ ಪಾತ್ರವಹಿಸಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಕನ್ನಡ ಬಳಸಿದಾಗ ಮಾತ್ರ ಕನ್ನಡವನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದರು.
ವಿದ್ಯಾರ್ಥಿನಿ ಗರೀಮಾ ಕುಮಾರಿ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದಿದ್ದಾರೆ. ಗರೀಮಾ ಕುಮಾರಿ ಪೋಷಕರು ಬಿಹಾರ ರಾಜ್ಯದಿಂದ ಉದ್ಯೋಗಕ್ಕಾಗಿ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬಂದಿದ್ದಾರೆ. ಇವರ ಮನೆಯ ಭಾಷೆ ಹಿಂದಿಯಾದರೂ, ಗರೀಮಾ ಕುಮಾರಿ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದಿರುವುದು ಗಮನ ಸೆಳೆದಿದೆ.