ಬರದ ಬರೆಯಲ್ಲೂ ಅಕ್ಕಿ, ಸಕ್ಕರೆ, ಬೆಲ್ಲದ ಬೆಲೆ ಗಗನಕ್ಕೆ

KannadaprabhaNewsNetwork |  
Published : Aug 19, 2026, 02:15 AM IST
ಹುಬ್ಬಳ್ಳಿಯ ಎಪಿಎಂಸಿಯ ಅಂಗಡಿಯೊಂದರಲ್ಲಿ ಮಾರಾಟಕ್ಕಿಟ್ಟ ಬೆಲ್ಲದ ಪೆಂಟಿಗಳು. | Kannada Prabha

ಸಾರಾಂಶ

ಮಳೆ ಅಭಾವದಿಂದಾಗಿ ಬೆಳೆಗಳು ಸರಿಯಾಗಿ ಬೆಳೆಯದೇ ಮಣ್ಣಿನ ಮಕ್ಕಳಿಗೆ ಬರೆ ಎಳೆದಂತಾಗಿದೆ. ಇದರ ಬೆನ್ನಲ್ಲೇ ಕಳೆದ ಒಂದು ತಿಂಗಳಿಂದ ಅಕ್ಕಿ ಸೇರಿ 10ಕ್ಕೂ ಹೆಚ್ಚು ಅಡುಗೆ ದಿನಸಿಗಳ ಬೆಲೆ ಕಿಲೋವೊಂದಕ್ಕೆ ₹5ರಿಂದ ₹ 10ರ ವರೆಗೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಕುಟುಂಬದ ಖರ್ಚು-ವೆಚ್ಚ ನಿಭಾಯಿಸುವುದೆ ಹೊರೆಯಾಗುತ್ತಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಮಳೆ ಅಭಾವದಿಂದಾಗಿ ಬೆಳೆಗಳು ಸರಿಯಾಗಿ ಬೆಳೆಯದೇ ಮಣ್ಣಿನ ಮಕ್ಕಳಿಗೆ ಬರೆ ಎಳೆದಂತಾಗಿದೆ. ಇದರ ಬೆನ್ನಲ್ಲೇ ಕಳೆದ ಒಂದು ತಿಂಗಳಿಂದ ಅಕ್ಕಿ ಸೇರಿ 10ಕ್ಕೂ ಹೆಚ್ಚು ಅಡುಗೆ ದಿನಸಿಗಳ ಬೆಲೆ ಕಿಲೋವೊಂದಕ್ಕೆ ₹5ರಿಂದ ₹ 10ರ ವರೆಗೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಕುಟುಂಬದ ಖರ್ಚು-ವೆಚ್ಚ ನಿಭಾಯಿಸುವುದೆ ಹೊರೆಯಾಗುತ್ತಿದೆ.

ಶ್ರಾವಣ ಹಿಂದೂಗಳಿಗೆ ಪವಿತ್ರ ಮಾಸವಾಗಿದ್ದು, ತಿಂಗಳ ಪರ್ಯಂತ ಮನೆ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ, ಜಾತ್ರೆ, ರುದ್ರಾಭಿಷೇಕ, ಮಂಗಲ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ. ನಾಗರಪಂಚಮಿ ಮುಗಿದಿದ್ದು, ರಕ್ಷಾ ಬಂಧನ, ವರಮಹಾಲಕ್ಷ್ಮಿ ಹಬ್ಬ, ಮಂಗಳಗೌರಿ ಪೂಜೆ, ಶ್ರೀಕೃಷ್ಣ ಜನ್ಮಾಷ್ಟಮಿ ಬಳಿಕ ಗಣೇಶ ಚತುರ್ಥಿ, ಮಹಾನವಮಿ, ವಿಜಯದಶಮಿ, ಮೂರು ದಿನ ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳ ವೇಳೆ ಸಿಹಿ ಭೋಜನ ತಯಾರಿಸಲಾಗುತ್ತಿದ್ದು, ಬೆಲೆಗಳು ಏರಿಕೆಯಾಗಿರುವುದು ಗ್ರಾಹಕರಿಗೆ ತಲೆಬಿಸಿ ಉಂಟು ಮಾಡಿದೆ.

ಅಕ್ಕಿಯಲ್ಲಿ ಹಲವಾರು ವಿಧಗಳಿದ್ದು, ಸೋನಾಮಸೂರಿ ಕಿಲೋಗೆ ₹ 65, ಜೀರಾ ₹ 75ರಿಂದ ₹ 80, ಬಾಸುಮತಿ ₹ 115, ರಾ ರೈಸ್‌ ₹ 70, ₹ 75, ₹ 85ರ ವರೆಗೂ ಮಾರಾಟವಾಗುತ್ತಿದೆ. ಕಳೆದ ಒಂದೂವರೆ ತಿಂಗಳಿಂದಲೂ ಅಕ್ಕಿ ಬೆಲೆ ಹೆಚ್ಚಳವಾಗುತ್ತಿದ್ದು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಮಾರುಕಟ್ಟೆಗಳಿಗೆ ಗಂಗಾವತಿ, ಸಿಂಧನೂರು, ಮಸ್ಕಿ, ಮಾನವಿಯಿಂದ ಹಾಗೂ ನೆರೆಯ ಆಂಧ್ರಪ್ರದೇಶ ತಮಿಳುನಾಡಿನಿಂದ ಅಕ್ಕಿ ಬರುತ್ತದೆ.

ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ಗೇಟ್‌ ಅಳವಡಿಕೆ ಹಿನ್ನೆಲೆಯಲ್ಲಿ ಬೇಸಿಗೆ ಭತ್ತದ ಬೆಳೆ ಬಂದಿಲ್ಲ. ಪರಿಣಾಮ ಅಕ್ಕಿ ಅಭಾವ ಉಂಟಾಗಿದ್ದು, ಗ್ರಾಹಕರು ಹೌಹಾರುವಂತೆ ದರ ಏರುತ್ತಿದೆ. ತುಂಗಭದ್ರಾ ಮಡಿಲಲ್ಲಿ ಯಥೇಚ್ಛವಾಗಿ ಬೆಳೆಯುವ ಸೋನಾಮಸೂರಿ ಅಕ್ಕಿ ಕಿಲೋಗೆ ₹ 10ರಿಂದ ₹ 15ರ ವರೆಗೂ ಹೆಚ್ಚಳವಾಗಿದೆ ಎನ್ನುತ್ತಾರೆ ಅಕ್ಕಿ ವ್ಯಾಪಾರಸ್ಥರು.

ಬೆಲೆ ಏರಿಕೆ ಬಿಸಿ:

ಕಿಲೋಗೆ ₹ 43 ಇದ್ದ ಸಕ್ಕರೆ ಬೆಲೆ ಈಗ ₹ 55ಕ್ಕೆ ಹೆಚ್ಚಳವಾಗಿದೆ. ಬೆಲ್ಲವೂ ಸಹ ₹ 50ರಿಂದ ₹ 56 ಹಾಗೂ ಗುಣಮಟ್ಟದ ಮಹಾಲಿಂಗಪುರ ಬೆಲ್ಲ ₹ 60ರ ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಈ ಬಾರಿ ನಾಗರಪಂಚಮಿ ಉಂಡಿಗಳ ಬೆಲೆಯೂ ಕಿಲೋಗೆ ₹ 30ರಿಂದ ₹ 40ರ ವರೆಗೂ ಹೆಚ್ಚಿಸಿದ್ದು ಕಂಡುಬಂತು.

ಅಡುಗೆ ತಯಾರಿಗೆ ಬಳಸುವ ಶೇಂಗಾ ಎಣ್ಣೆ, ಪಾಮ್‌ ಆಯಿಲ್‌, ಸನ್‌ ಫ್ಲಾವರ್‌ ಎಣ್ಣೆಗಳ ಬೆಲೆಯೂ ಹೆಚ್ಚಳವಾಗಿದ್ದು, ಲೀಟರ್‌ಗೆ (ಬೇರೆ ಬೇರೆ ವಿಧ) ₹ 170ರಿಂದ ₹ 200ರ ವರೆಗೆ ಮಾರಾಟವಾಗುತ್ತಿದೆ. ಮಲೇಷಿಯಾ, ಇಂಡೋನೆಷ್ಯಾದಿಂದ ಪಾಮ ಆಯಿಲ್‌, ಉಕ್ರೇನ್‌ದಿಂದ ಕಚ್ಚಾತೈಲ ಭಾರತಕ್ಕೆ ಬರುತ್ತಿದೆ.

ಉದ್ದಿನ ಬೆಳೆ ₹ 150, ಪುಟಾಣಿ ₹ 90, ಹಸಿಬೆಳೆಹಿಟ್ಟು ₹ 100, ಶೇಂಗಾ ₹ 160, ಹೆಸರು ಕಾಳು ₹ 115, ಮಡಿಕೆ ₹95 ಹೀಗೆ ಇವುಗಳ ಬೆಲೆ ₹ 5ರಿಂದ ₹ 10ರ ವರೆಗ ಹೆಚ್ಚಳ ಕಂಡಿವೆ.

ಎರಡ್ಮೂರು ತಿಂಗಳ ಹಿಂದೆ ವಾಣಿಜ್ಯ ಸಿಲಿಂಡರ್‌ ಬೆಲೆ ಹೆಚ್ಚಳದಿಂದಾಗಿ ಹೋಟೆಲ್‌ ತಿಂಡಿ-ತಿನಿಸುಗಳ ಬೆಲೆಯನ್ನು ₹ 5ರ ವರೆಗೂ ಹೆಚ್ಚಳ ಮಾಡಿದ್ದೇವೆ. ಈಗ ದಿನಸಿಗಳ ಬೆಲೆಯೂ ಸಹ ಹೆಚ್ಚಳವಾಗಿದ್ದು, ಹೋಟೆಲ್‌ ನಡೆಸುವುದೇ ಕಷ್ಟವಾಗುತ್ತಿದೆ ಎನ್ನುತ್ತಾರೆ ಹೊಟೇಲ್‌ವೊಂದರ ಮಾಲೀಕರು.ಬೆಲ್ಲ, ಸಕ್ಕರೆ, ಪುಟಾಣಿ, ಅಕ್ಕಿ ಸೇರಿ ಹಲವು ದಿನಸಿಗಳ ಬೆಲೆ ಕಿಲೋಗೆ ₹ 5ರಿಂದ ₹ 10ರ ವರೆಗೂ ಹೆಚ್ಚಳವಾಗಿದೆ. ಮಾರುಕಟ್ಟೆಗೆ ಬೇಡಿಕೆಯಂತೆ ದಿನಸಿಗಳು ಪೂರೈಕೆಯಾಗುತ್ತಿಲ್ಲ. ಅಭಾವ ಉಂಟಾಗುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಲೆ ಹೆಚ್ಚಳವಾಗುತ್ತಿವೆ.

ಭರತ ಪಟೇಲ್‌, ಪಟೇಲ್‌ ಟ್ರೇಡರ್ಸ್‌ ಮಾಲೀಕಈ ಬಾರಿ ಮಳೆ ಅಭಾವದಿಂದಾಗಿ ಎಲ್ಲೆಡೆ ಬರ ಆವರಿಸಿದೆ. ಆದರೂ ದಿನಸಿಗಳ ಬೆಲೆ ಭರಪೂರ ಹೆಚ್ಚಳವಾಗಿರುವುದು ಅಡುಗೆ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸುವುದೇ ಗೃಹಿಣಿಯರಿಗೆ ಹೊರೆಯಾಗಿ ಪರಿಣಮಿಸಿದೆ.

ಶಿವಲೀಲಾ, ಗೃಹಿಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು, ಮಕ್ಕಳಿಂದ ಹೊಳೆ ಗಂಗಾ ಪೂಜೆ
ಕೂಲಿಕಾರರಿಗೆ ಸ್ಕೀಂನ ಲಾಭ ಪಡೆಯಲಿ: ಪಾಟೀಲ್