
ಕಾರವಾರ: ಕುಮಟಾದ ಕುಂಬೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ತೀರ್ಪು ನೀಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಈ ಹಿಂದೆ ಮತ್ತೊಂದು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಹರೀಶ್ ಹೆಗಡೆಗೆ ಧನಂಜಯ ನಾಯ್ಕನ ಪರಿಚಯವಾಗಿದ್ದು, ಬಳಿಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣದಲ್ಲೂ ಧನಂಜಯ ಭಾಗಿಯಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.ವಿಶ್ವೇಶ್ವರ ಭಟ್ ಅವರಿಗೆ ಧನಂಜಯ ಪರಿಚಯವಿಲ್ಲದ ಹಿನ್ನೆಲೆಯಲ್ಲಿ ಪೂಜೆಯ ನೆಪವೊಡ್ಡಿ ಮೂರೂರಿನಲ್ಲಿ ಜಮೀನು ಪೂಜೆ ಇದೆ ಎಂದು ಹೇಳಿ ಅವರನ್ನು ಆರೋಪಿಗಳು ಮೋಸದಿಂದ ಕರೆದುಕೊಂಡು ಹೋಗಿದ್ದರು. ಬಳಿಕ ಕೂಜಳ್ಳಿಯಲ್ಲಿರುವ ಮಂಜುನಾಥ ಹೆಗಡೆ ಅವರ ತೋಟದಲ್ಲಿ ವಿಶ್ವೇಶ್ವರ ಭಟ್ ಅವರ ತಲೆಗೆ ಕಾಯಿ ಸುಲಿಯುವ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿತ್ತು. ಬಳಿಕ ಶವವನ್ನು ಅದೇ ತೋಟದಲ್ಲಿ ಹೂತು ಹಾಕಲಾಗಿತ್ತು. ವಿಶ್ವೇಶ್ವರ ಭಟ್ ಅವರ ಬೈಕ್‌ನ್ನು ತೋಟದ ಬಾವಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.ವಿಶ್ವೇಶ್ವರ ಭಟ್ ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಸರಸ್ವತಿ ಭಟ್ ಅವರು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಅಂದಿನ ಸಿಪಿಐ ಸಂತೋಷ ಶೆಟ್ಟಿ ಹಾಗೂ ಪಿಎಸ್‌ಐ ಸಂಪತ್ ಅವರ ನೇತೃತ್ವದ ತಂಡ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತು.ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಯ ಆಧಾರದ ಮೇಲೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ವಾದ-ಪ್ರತಿವಾದಗಳನ್ನು ಆಲಿಸಿ ಗುರುವಾರ ಮೂವರು ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದೂರುದಾರರ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.