ಕುಂಭಮೇಳದಲ್ಲಿ ನಾಪತ್ತೆ ಆಗಿದ್ದ ಅರ್ಚಕ 6 ತಿಂಗಳ ಬಳಿಕ ಮನೆಗೆ

KannadaprabhaNewsNetwork |  
Published : Jun 10, 2025, 04:23 AM ISTUpdated : Jun 10, 2025, 10:00 AM IST
Kumba Mela

ಸಾರಾಂಶ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ವರ್ಷದ ಜನವರಿ-ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಕಡೂರಿನ ವ್ಯಕ್ತಿಯೊಬ್ಬರು 6 ತಿಂಗಳ ಬಳಿಕ ಮನೆ ಸೇರಿದ್ದಾರೆ.

 ಕಡೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ವರ್ಷದ ಜನವರಿ-ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಕಡೂರಿನ ವ್ಯಕ್ತಿಯೊಬ್ಬರು 6 ತಿಂಗಳ ಬಳಿಕ ಮನೆ ಸೇರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಂಗಲಿ ಗ್ರಾಮದ ದೇವಾಲಯದಲ್ಲಿ ಅರ್ಚಕರಾಗಿದ್ದ ನರಸಿಂಹಮೂರ್ತಿ ಅವರು ಸಂಬಂಧಿಕರ ಜೊತೆ ಮಹಾ ಕುಂಭಮೇಳಕ್ಕೆ ಹೋಗಿದ್ದಾಗ ಜ.28ರಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಿಂದ ನಾಪತ್ತೆಯಾಗಿದ್ದರು. ಮರುದಿನವೇ ಅಲ್ಲಿ ಕಾಲ್ತುಳಿತ ಸಂಭವಿಸಿ, ಹಲವರು ಮೃತಪಟ್ಟ ಘಟನೆಯೂ ನಡೆದಿತ್ತು.

ಸಹ ಯಾತ್ರಿಕರು ಇವರನ್ನು ಎಲ್ಲಾ ಕಡೆ ಹುಡುಕಿದರೂ ಅವರು ಪತ್ತೆಯಾಗಿರಲಿಲ್ಲ. ಬಳಿಕ, ಉಳಿದವರು ಊರಿಗೆ ಮರಳಿದ್ದರು. ನರಸಿಂಹಮೂರ್ತಿಯವರು ನಾಪತ್ತೆಯಾಗಿದ್ದರಿಂದ ಅವರ ಕುಟುಂಬಸ್ಥರು ಆತಂಕಗೊಂಡಿದ್ದರು. ಅವರ ಪುತ್ರ ಬದರೀನಾಥ್ ಅವರು ಪ್ರಯಾಗ್‌ರಾಜ್‌ಗೆ ತೆರಳಿ ತಂದೆಯ ಹುಡುಕಾಟ ನಡೆಸಿದ್ದರು. ಜೊತೆಗೆ ಅಲ್ಲಿನ ಪೊಲೀಸ್‌ ಠಾಣೆಗೆ ದೂರನ್ನೂ ನೀಡಿದ್ದರು. ಆದರೆ, ಇವರು ಪತ್ತೆಯಾಗಿರಲಿಲ್ಲ.

ಬಳಿಕ, ಇವರು ಅದ್ಹೇಗೋ ಮುಂಬೈ ತಲುಪಿದ್ದು, ಮುಂಬೈನ ‘ಶ್ರದ್ಧಾ ರಿ ಹೆಬಿಲಿಟೇಷನ್ ಸೆಂಟರ್’ನಲ್ಲಿ ಆಶ್ರಯ ಪಡೆದಿದ್ದರು. ಇತ್ತೀಚೆಗೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಪಕ್ಕದ ಮೊಸಳೆ ಗ್ರಾಮದ ಕೆಲವರು ಇವರ ಗುರುತು ಹಿಡಿದಿದ್ದು, ಸಂಸ್ಥೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ, ಸಂಸ್ಥೆಯವರು ಇವರ ಕುಟುಂಬಸ್ಥರನ್ನು ಸಂಪರ್ಕಿಸಿ, ಮಾಹಿತಿ ಪಡೆದು, ನರಸಿಂಹಮೂರ್ತಿಯವರನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನರಸಿಂಹಮೂರ್ತಿಯವರ ಪುತ್ರ ಬದರೀನಾಥ್, ‘ನಮ್ಮ ತಂದೆಯವರಿಗೆ ಮರೆವಿನ ಸಮಸ್ಯೆ ಇತ್ತು. ಪ್ರಯಾಗ್‌ರಾಜ್‌ನ ಜನಜಂಗುಳಿಯಲ್ಲಿ ತಪ್ಪಿಸಿಕೊಂಡಿದ್ದರು. ಬಳಿಕ, ಮುಂಬೈ ಸೇರಿ, ಮುಂಬೈನ ‘ಶ್ರದ್ಧಾ ರಿ ಹೆಬಿಲಿಟೇಷನ್ ಸೆಂಟರ್’ನಲ್ಲಿ ಆಶ್ರಯ ಪಡೆದಿದ್ದರು. ನಮ್ಮ ಪಕ್ಕದೂರು ಮೊಸಳೆ ಗ್ರಾಮದ ಕೆಲವರು ಇವರ ಗುರುತು ಹಿಡಿದು, ಸಂಸ್ಥೆಯವರಿಗೆ ಮಾಹಿತಿ ನೀಡಿದ್ದರಿಂದ ಸಂಸ್ಥೆಯವರೇ ನಮ್ಮ ಮನೆಗೆ ತಂದೆಯನ್ನು ಕರೆ ತಂದು ನಮಗೆ ಒಪ್ಪಿಸಿದ್ದಾರೆ’ ಎಂದು ತಿಳಿಸಿದ್ದಾರೆ.

PREV
Read more Articles on

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌