ಕನ್ನಡಪ್ರಭ ವಾರ್ತೆ ನಾಗಮಂಗಲ
ಮುಜರಾಯಿ ದೇವಸ್ಥಾನಗಳ ಅರ್ಚಕರ ಹಿತಕಾಯುವ ನಿಟ್ಟಿನಲ್ಲಿ ಸಂಘವು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ತಸ್ತಿಕ್ ಹಣ ವರ್ಗಾಯಿಸಲು ಮತ್ತು ನೇಮಕಾತಿ ಆದೇಶ ಪತ್ರಕ್ಕಾಗಿ ಎಲ್ಲ ಅರ್ಚಕರು ಅಗತ್ಯ ದಾಖಲೆಗಳನ್ನು ತಾಲೂಕು ಕಚೇರಿಗೆ ಸಲ್ಲಿಸಬೇಕೆಂದು ತಾಲೂಕು ಮುಜುರಾಯಿ ದೇವಸ್ಥಾನಗಳ ಅರ್ಚಕರು ಮತ್ತು ಆಗಮಿಕರ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿಂದೂ ಧರ್ಮಗುರುಗಳ ಆಚರಣೆ ಮತ್ತು ಅರ್ಚಕರು ಸರ್ಕಾರದ ಸವಲತ್ತು ಪಡೆಯುವ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಜುರಾಯಿ ದೇವಸ್ಥಾನಗಳ ಅರ್ಚಕರಿಗೆ ಸಂಘದಿಂದ ಈಗಾಗಲೇ ಗುರುತಿನ ಚೀಟಿ ಹಾಗೂ ಆಗಮ ತರಬೇತಿ ದೃಢೀಕರಣ ಪತ್ರ ಕೊಡಿಸಲಾಗಿದೆ. ಪ್ರತಿ ತಿಂಗಳ ತಸ್ತಿಕ್ ಹಣವನ್ನೂ ಕೂಡ ಸರ್ಕಾರ ಡಿಬಿಟಿ ಮೂಲಕ ಅರ್ಚಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುತ್ತಿದೆ ಎಂದರು.ತಾಲೂಕಿನ ಬಹುತೇಕ ಅರ್ಚಕರು ತಮ್ಮ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸದಿರುವುದರಿಂದ ತಸ್ತಿಕ್ ಹಣವನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿಲ್ಲ. ವಂಶ ಪಾರಂಪರ್‍ಯವಾಗಿ ದೇವಾಲಯಗಳಲ್ಲಿ ಅರ್ಚಕ ವೃತ್ತಿ ಮಾಡುತ್ತಿರುವವರಿಗೆ ನೇಮಕಾತಿ ಆದೇಶ ಪತ್ರ ನೀಡಲು ಸರ್ಕಾರ ಮುಂದಾಗಿದೆ. ಆದ್ದರಿಂದ ಅರ್ಚಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಮುಜುರಾಯಿ ದೇವಸ್ಥಾನಗಳ ಅರ್ಚಕರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಮಾತನಾಡಿ, ಸಂಘ ಮತ್ತು ಟ್ರಸ್ಟ್‌ನ ಹೋರಾಟದ ಫಲವಾಗಿ ಸರ್ಕಾರ ಡಿಬಿಟಿ ಮೂಲಕ ತಸ್ತಿಕ್ ಹಣವನ್ನು ಅರ್ಚಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಬೆರಳೆಣಿಕೆಯಷ್ಟು ಮಂದಿ ಅರ್ಚಕರು ಮಾತ್ರ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಇನ್ನುಳಿದ ಅರ್ಚಕರೂ ಸಹ ಅಗತ್ಯ ದಾಖಲೆ ಶೀಘ್ರದಲ್ಲಿಯೇ ಸಲ್ಲಿಸಬೇಕು ಎಂದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಮಾತನಾಡಿದರು. ಇದಕ್ಕೂ ಮುನ್ನ ಹಿಂದೂ ಧರ್ಮಗುರುಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ತಾಲೂಕು ಸಂಘದ ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಲೋಕೇಶ್ ಮತ್ತು ಖಜಾಂಚಿ ಪ್ರಕಾಶ್ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ರೇವಣ್ಣ, ನಾಗರಾಜು, ಪ್ರೇಮಣ್ಣ, ರಾಜೇಂದ್ರ, ವಾಸು, ಪ್ರಸನ್ನ ಸೇರಿದಂತೆ ನೂರಾರು ಮಂದಿ ಅರ್ಚಕರು ಇದ್ದರು.