ಸರ್ಕಾರಿ ಶಾಲೆಗಳ ವ್ಯವಸ್ಥಿತ ಕುಸಿತ; ತಕ್ಷಣವೇ ಸರ್ಕಾರ ಮಧ್ಯಪ್ರವೇಶಕ್ಕೆ ಆಪ್‌ ಆಗ್ರಹ

KannadaprabhaNewsNetwork |  
Published : May 27, 2026, 03:15 AM IST
ಆಪ್‌ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಪ್ರಾಥಮಿಕ ಶಿಕ್ಷಣದ ವ್ಯಾಪಾರೀಕರಣ ಮತ್ತು ಸರ್ಕಾರಿ ಶಾಲೆಗಳ ವ್ಯವಸ್ಥಿತ ಕುಸಿತಕ್ಕೆ ಆಮ್‌ ಆದ್ಮಿ ಪಾರ್ಟಿ (ಆಪ್‌) ದ.ಕ. ಜಿಲ್ಲಾ ಘಟಕ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣದ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ.

ಮಂಗಳೂರು: ಪ್ರಾಥಮಿಕ ಶಿಕ್ಷಣದ ವ್ಯಾಪಾರೀಕರಣ ಮತ್ತು ಸರ್ಕಾರಿ ಶಾಲೆಗಳ ವ್ಯವಸ್ಥಿತ ಕುಸಿತಕ್ಕೆ ಆಮ್‌ ಆದ್ಮಿ ಪಾರ್ಟಿ (ಆಪ್‌) ದ.ಕ. ಜಿಲ್ಲಾ ಘಟಕ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣದ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್‌ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್‌, 2026-27ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಖಾಸಗಿ ಶಾಲೆಗಳು ನಿಯಂತ್ರಣವಿಲ್ಲದ ವಿವಿಧ ಮೂಲಗಳ ಮೂಲಕ ಪೋಷಕರಿಂದ ಗಗನಚುಂಬಿ ಶುಲ್ಕವನ್ನು ವಸೂಲಿ ಮಾಡಿ ಶೋಷಿಸುತ್ತಿದೆ. ಇದರಿಂದಾಗಿ ಗುಣಮಟ್ಟದ ಶಿಕ್ಷಣ ಕೇವಲ ಶ್ರೀಮಂತರ ಪಾಲಿನ ಐಷಾರಾಮಿ ವಸ್ತುವಾಗಿ ಮಾರ್ಪಟ್ಟಿದೆ ಎಂದರು.ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಸರ್ವ ಶಿಕ್ಷಾ ಅಭಿಯಾನದಂತಹ ಭವ್ಯ ಘೋಷಣೆಗಳಿಗೂ ಹಾಗೂ ವಾಸ್ತವ ಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸವಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ನುರಿತ ಶಿಕ್ಷಕರ ಕೊರತೆಯಿಂದಾಗಿ ಅನಿವಾರ್ಯವಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ. ವಾರ್ಷಿಕ 2.5 ಲಕ್ಷ ರು. ಆದಾಯವಿರುವ ಸಾಮಾನ್ಯ ನಾಗರಿಕನ ಗಳಿಕೆ ಬಹುದೊಡ್ಡ ಭಾಗ ಮಕ್ಕಳ ಶಾಲಾ ಶುಲ್ಕಕ್ಕೆ ಖರ್ಚಾಗುತ್ತಿದೆ. ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಉಚಿತ ಪ್ರಾಥಮಿಕ ಶಿಕ್ಷಣವ್ವನ್ನು ನೀಡುತ್ತಿದ್ದರೆ, ಭಾರತದ ಪ್ರಸ್ತುತ ವ್ಯವಸ್ಥೆ ತಾರತಮ್ಯದಿಂದ ಕೂಡಿದ್ದು, ಬಡವ ಮತ್ತು ಶ್ರೀಮಂತರ ನಡುವಿನ ಕಂದಕವನ್ನು ಮತ್ತುಷ್ಟು ಹೆಚ್ಚಿಸುತ್ತಿದೆ ಎಂದು ಅವರು ಆರೋಪಿಸಿದರು. ಶಿಕ್ಷಣ ತಜ್ಷರು ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ ಶೇ.15 ಬಜೆಟ್‌ ಹಂಚಿಕೆ ಮಾಡಬೇಕು ಎಂದು ಸತತವಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಸ್ತುತ ಅಲ್ಪ ಧನಸಹಾಯ ಖಾಸಗಿ ಶಾಲಾ ಲಾಬಿಗೆ ನೇರವಾಗಿ ಲಾಭ ಮಾಡಿಕೊಡಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ನಿರ್ಲಕ್ಷ್ಯ ಎಂಬುದನ್ನು ತೋರಿಸುತ್ತದೆ. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಕ್ಷಣವೇ ಮಧ್ಯಪ್ರವೇಶಿಸಿ ಖಾಸಗಿ ಶಾಲೆಗಳ ಶುಲ್ಕ ರಚನೆಯನ್ನು ನಿಯಂತ್ರಿಸಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಬಜೆಟ್‌ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪಕ್ಷದ ಪ್ರಮುಖರಾದ ಎಸ್‌.ಆರ್‌.ಲೋಬೊ, ಸೀಮಾ ಮಡಿವಾಳ, ಎಸ್‌.ಎಲ್‌.ಪಿಂಟೊ, ವಾಸುದೇವ್‌, ನಜೀರ್‌ ಅಹಮದ್‌ ಬಾವ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸೇಲ್ ಕೊರತೆ: ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ
ಸಮುದಾಯ ಆಸ್ಪತ್ರೆ ಅವ್ಯವಹಾರ ಆರೋಪ