ಬಂಟವಾಳ ಅಮೃತ್ ಭಾರತ್ ರೈಲ್ವೇ ಸ್ಟೇಷನ್ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ

KannadaprabhaNewsNetwork | Updated : Feb 27 2024, 12:34 PM IST

ಸಾರಾಂಶ

ರು. 28.49 ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಬಂಟವಾಳ ಅಮೃತ್ ಭಾರತ್ ರೈಲ್ವೇ ಸ್ಟೇಷನ್ ನ ಕಾಮಗಾರಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ದಕ್ಷಿಣ ಕನ್ನಡ ಸಂಸದನಾದ ಮೇಲೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತನ್ನ ಪ್ರಯತ್ನದಿಂದ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರು.ಗಳ ಅಭಿವೃದ್ಧಿಯಾಗಿದೆ. 

ಕಣ್ಣು ಬಿಟ್ಟು ನೋಡಿದರೆ ಅದು ಗೊತ್ತಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ವಿರದ್ಧದ ಟೀಕಾಕಾರರಿಗೆ ಗರಂ ಪ್ರತಿಕ್ರಿಯೆ ನೀಡಿದ್ದಾರೆ.ರು. 28.49 ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಬಂಟವಾಳ ಅಮೃತ್ ಭಾರತ್ ರೈಲ್ವೇ ಸ್ಟೇಷನ್ ನ ಕಾಮಗಾರಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು. 

ಈ ಯೋಜನೆಯಡಿ ಬಂಟ್ವಾಳ ರೈಲ್ವೆ ನಿಲ್ದಾಣ ಆಯ್ಕೆಯಾಗುವಲ್ಲಿ ಸಹಕರಿಸಿದ ಸಂಸದರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳದ ಜನತೆಯ ಪರವಾಗಿ ಅಭಿನಂದಿಸಿದರು.

ಈ ಸಂದರ್ಭ ಮಾತನಾಡಿದ ನಳಿನ್, ಕೇಂದ್ರ ಸರ್ಕಾರ ಕೊಡಬೇಕು ಎಂದಾದರೆ, ಲೋಕಸಭೆ ಸದಸ್ಯರ ಪ್ರಯತ್ನ ಬೇಕು ಎಂಬುದು ತಿಳಿದಿರಲಿ ಎಂದ ನಳಿನ್, ಚಾರ್ಮಾಡಿ ಘಾಟಿ ರಸ್ತೆ 350 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಮಾಣಿ ಮೈಸೂರು ರಸ್ತೆ ಅಭಿವೃದ್ಧಿ ಆಗಿದ್ದು, ಇನ್ನು ಚತುಷ್ಪಥವಾಗಲಿದೆ. 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಯಾಗಿದೆ. ದೇಶದ ಏಕೈಕ ಪ್ಲಾಸ್ಟಿಕ್ ಪಾರ್ಕ್ ಮಂಗಳೂರಿನಲ್ಲಿದೆ. 

ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ವೇಗ ಪಡೆದಿದೆ ಎಂದರು.ತಾನು ಸಂಸದನಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ವೇಗದಿಂದ ಆಗಿವೆ. 

ಕಳೆದ 10 ವರ್ಷಗಳಲ್ಲಿ 2650 ಕೋಟಿ ರು.ಗಳನ್ನು ನರೇಂದ್ರ ಮೋದಿ ಸರ್ಕಾರ ಕೊಟ್ಟಿದೆ. ಇದು ತನ್ನ ಪ್ರಯತ್ನದಿಂದ ಆಗಿದೆ. ಪಾಲ್ಘಾಟ್ ನಿಂದ ಮಂಗಳೂರಿನ ಎಲೆಕ್ಟ್ರಿಫಿಕೇಶನ್ ಮುಗಿದಿದೆ. ಪುತ್ತೂರು ರೈಲ್ವೆ ನಿಲ್ದಾಣ ಆದರ್ಶ ಯೋಜನೆಯಡಿ ಅಭಿವೃದ್ಧಿಗೊಂಡರೆ, ಇಂದು ಬಂಟ್ವಾಳ ಮತ್ತು ಸುಬ್ರಹ್ಮಣ್ಯ ಸಂಪೂರ್ಣ ಬದಲಾಗಲಿದೆ. ನೇರಳಕಟ್ಟೆ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ರೈಲ್ವೆಯಲ್ಲಾಗುತ್ತಿರುವ ಬದಲಾವಣೆ ಹಾಗೂ ಭಾರತೀಯ ರೈಲ್ವೆ ಕುರಿತ ಮಾಹಿತಿಯನ್ನು ಭವಿಷ್ಯದ ಜನಾಂಗ ಪಡೆಯಬೇಕಾದ ಅಗತ್ಯವಿದೆ. ಈ ಕಾರಣದಿಂದ ಮಕ್ಕಳಿಗೆ ಪ್ರಬಂಧ ಸಹಿತ ಸ್ಪರ್ಧೆಗಳನ್ನು ಅಯೋಜಿಸಲಾಗಿದ್ದು, ರಾಷ್ಟ್ರದಾದ್ಯಂತ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಶ್ಲಾಘಿಸಿದರು.

ರೈಲ್ವೆ ಡಿವಿಝನಲ್ ಇಂಜಿನಿಯರ್ ಸಾವನ್ ಕುಮಾರ್, ಅಸಿಸ್ಟೆಂಟ್ ಕಮರ್ಶಿಯಲ್ ಮ್ಯಾನೇಜರ್ ಉಮೇಶ್ ನಾಯಕ್ ಇದ್ದರು. ಮೈಸೂರಿನ ಮೆಕ್ಯಾನಿಕಲ್ ವಿಭಾಗದ ಕವಿತಾ ಮತ್ತು ಚೀಫ್ ಟಿಕೆಟ್ ಇನ್ಸ್ ಪೆಕ್ಟರ್ ವಿಠಲ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆ, ಕಾಲೇಜು ಮಕ್ಕಳಿಗೆ ನಡೆಸಿದ ಪ್ರಬಂಧ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ರೈಲ್ವೆ ಇಲಾಖೆಯ ಕುರಿತ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ರಾಮದಾಸ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್, ದೇವಪ್ಪ ಪೂಜಾರಿ ಸಹಿತ ಪ್ರಮುಖರು ಇದ್ದರು.

Share this article