ಕನ್ನಡಪ್ರಭ ವಾರ್ತೆ ಮಂಗಳೂರು
2024ರ ಲೋಕಸಭಾ ಚುನಾವಣೆಗೆ ಈ ಬಾರಿ ಕರಾವಳಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆಸುವ ಬಗ್ಗೆ ಮತ್ತೆ ಬಿಜೆಪಿ ಪಾಳಯದಲ್ಲಿ ಪ್ರಯತ್ನ ನಡೆಯುತ್ತಿದೆ. ದ.ಕ. ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುವುದರಿಂದ ಏಪ್ರಿಲ್ 20ರ ಬಳಿಕ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆ ಇದೆ.ದ.ಕ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಕ್ಲಸ್ಟರ್ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾ.18ರಂದು ಆಗಮಿಸಿ ರಾಜ್ಯದ ಮೊದಲ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯ ಇರುವುದರಿಂದ ನಾಮಪತ್ರ ಸಲ್ಲಿಕೆ ಆರಂಭವಾದ ಬಳಿಕ ಮತ್ತೆ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆಸುವ ಸಂಭವ ಇಲ್ಲ ಎಂದೇ ಹೇಳಲಾಗಿತ್ತು. ನರೇಂದ್ರ ಮೋದಿ ಬದಲು ಅಮಿತ್ ಶಾ ಅಥವಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸುವ ಚಿಂತನೆಯೂ ನಡೆದಿತ್ತು. ಆದರೆ ಇದೀಗ ಬಿಜೆಪಿ ನಾಯಕರು, ಕರಾವಳಿಗೆ ನರೇಂದ್ರ ಮೋದಿ ಅವರನ್ನು ಕರೆಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಚುನಾವಣಾ ನಾಯಕತ್ವದ ಜತೆ ಮಾತುಕತೆ ನಡೆಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ದ.ಕ, ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಅಂದರೆ ಏ.26ರಂದು ಮತದಾನ ನಡೆಯುತ್ತದೆ. ಹಾಗಾಗಿ ಏ.20ರ ನಂತರ ಚುನಾವಣಾ ಪ್ರಚಾರದ ಕೊನೆ ಹಂತದಲ್ಲಿ ನರೇಂದ್ರ ಮೋದಿ ಅವರನ್ನು ಕರಾವಳಿಗೆ ಆಹ್ವಾನಿಸಲು ಚಿಂತಿಸಲಾಗಿದೆ. ದ.ಕ. ಅಥವಾ ಉಡುಪಿ ಜಿಲ್ಲೆಯಲ್ಲಿ ನರೇಂದ್ರ ಮೋದಿ ಅವರ ಸಮಾವೇಶ ಆಯೋಜಿಸಲು ಮುಖಂಡರು ಯೋಚಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸ ನಿಗದಿ ವೇಳೆ ಕರಾವಳಿ ಭೇಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.