ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿದೇಶದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮುಂಚೂಣಿಯ ನಾಯಕರಾಗಿದ್ದು, ಅವರ ಸೇವೆ ನಮಗೆ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಕಾಯಕ ಭವನದಲ್ಲಿ ಮಂಡಲ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಪ್ರಧಾನಿ ವಿಶ್ರಾಂತಿ ಇಲ್ಲದೇ ಜನ ಸೇವೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಇದರಿಂದ ಭಾರತ ವಿಶ್ವದ 3ನೇ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಸಾಗಿದೆ ಎಂದರು.ನರೇಂದ್ರ ಮೋದಿ ಅವರ ಹತ್ತಾರು ಯೋಜನೆಗಳಲ್ಲಿ ಆತ್ಮನಿರ್ಭರ ಎಂಬ ಸಂದೇಶದೊಂದಿಗೆ ಭಾರತ ಸ್ವಾಭಿಮಾನಿ ರಾಷ್ಟ್ರವಾಗಿದೆ ಎಂದರು.
ದೇಶದ ಜನ ಆಯ್ಕೆ ಮಾಡಿದ ಮಹಾನ್ ನಾಯಕ ನರೇಂದ್ರ ಮೋದಿ ಜನಪ್ರಿಯತೆಗೆ ಕಂಗಾಲಾಗಿರುವ ಕಾಂಗ್ರೆಸ್ ನಾಯಕರು ಮತಗಳವು ನಾಟಕ ಆರಂಭಿಸಿದ್ದಾರೆ. ರಾಜ್ಯದಲ್ಲಿ 136 ಸ್ಥಾನ ಗಳಿಸಿದ ಕಾಂಗ್ರೆಸ್ ಕೂಡ ಮತಗಳ್ಳತನದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಮೂಲಕ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲವರ ಕುತಂತ್ರ ಫಲಿಸುವುದಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರೇ ಭಸ್ಮವಾಗುತ್ತಾರೆ. ಇತ್ತೀಚೆಗೆ ಸರ್ಕಾರದ ಒಳ ಮೀಸಲಾತಿ ಹಂಚಿಕೆ ವಿಚಾರದಲ್ಲಿ ಕೆಲವು ಜಾತಿಗಳೇ ಕಳೆದುಹೋಗಿವೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಶಾಸಕರಿಗೆ ಅನುದಾನ ನೀಡುವಲ್ಲಿ ಸಾಕಷ್ಟು ತಾರತಮ್ಯ ಮಾಡುತ್ತಿದೆ. ಕ್ಷೇತ್ರದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಶಾಲೆಗಳಿಗೆ ಕಾಂಕ್ರೀಟ್ ಬದಲು ತಗಡಿನ ಚಾವಣಿ ಹಾಕುತ್ತಿರುವುದು ಸರ್ಕಾರದ ಆರ್ಥಿಕ ಸ್ಥಿತಿ ಕ್ಷೀಣಿಸುವುದನ್ನು ಸಾಕ್ಷೀಕರಿಸುವಂತಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಅಭಿವೃದ್ಧಿ ಅಧೋಗತಿಗೆ ಇಳಿದಿದೆ ಎಂದರು.ಪಕ್ಷದ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಮಾತನಾಡಿ, ಸೆ. 17ರಿಂದ ಅ. 2ರ ವರೆಗೆ ದೇಶದ ನಾಲ್ವರು ಗಣ್ಯರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಅಚರಿಸುವ ಉದ್ದೇಶ ಹೊಂದಲಾಗಿದೆ. ರಕ್ತದಾನ ಪವಿತ್ರವಾಗಿದ್ದು, ಮಹಾನ್ ನಾಯಕರ ಜನ್ಮದಿನ ಸಾರ್ಥಕವಾಗಬೇಕು ಎಂದರು.
ಮೀರಾಬಾಯಿ ಮಾತನಾಡಿದರು. ಮಂಡಲ ಅಧ್ಯಕ್ಷ ಪೂಜಾರ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಈಟಿ ಲಿಂಗರಾಜ, ಬೀರಬ್ಬಿ ಬಸವರಾಜ, ಪೂಜಪ್ಪ, ಹಣ್ಣಿ ಶಶಿಧರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೈನ, ಕೋಟೆಪ್ಪ, ಡಾ. ಲಕ್ಷ್ಮಣನಾಯ್ಕ, ಭಾಗ್ಯಮ್ಮ, ಶಂಕರ್ ನವಲಿ, ವಿನೋದ ಜಾಡರ್, ಡಾ. ಪವನ್, ಕುಮಾರ್ ಕಮ್ಮಾರ ಇತರರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನೀತ್ ದೊಡ್ಡನೆ ಕಾರ್ಯಕ್ರಮ ನಿರ್ವಹಿಸಿದರು.