ಪ್ರಧಾನಿ ನರೇಂದ್ರ ಮೋದಿ ದೊಡ್ಡ ಸುಳ್ಳುಗಾರ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Updated : Nov 11 2024, 12:58 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ದೊಡ್ಡ ಸುಳ್ಳುಗಾರ. ಸುಳ್ಳು ಹೇಳಲೂ ಒಂದು ಇತಿಮಿತಿ ಇರಬೇಕು. ಅಷ್ಟು ದೊಡ್ಡ ಹುದ್ದೆಗೆ ಅವರು ನೀಡುತ್ತಿರುವ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ದೊಡ್ಡ ಸುಳ್ಳುಗಾರ. ಸುಳ್ಳು ಹೇಳಲೂ ಒಂದು ಇತಿಮಿತಿ ಇರಬೇಕು. ಅಷ್ಟು ದೊಡ್ಡ ಹುದ್ದೆಗೆ ಅವರು ನೀಡುತ್ತಿರುವ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಚುನಾವಣಾ ಪ್ರಚಾರ ವೇಳೆ ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯ ₹700 ಕೋಟಿ ಲೂಟಿ ಮಾಡಿ ಚುನಾವಣೆ ನಡೆಸುತ್ತಿದೆ ಎನ್ನುವ ಪ್ರಧಾನಿಗಳ ಹೇಳಿಕೆಗೆ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆ ಇದು.

ಈ ಹಿಂದೆ ಕಾಂಗ್ರೆಸ್‌ನ 17 ಮಂದಿ ಶಾಸಕರನ್ನು ಯಾವ ಹಣದಲ್ಲಿ ಖರೀದಿ ಮಾಡಿದರು? ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವಾಗ ₹2 ಸಾವಿರ ಕೋಟಿ ನೀಡಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರೇ ಆರೋಪಿಸಿದ್ದಾರೆ. ಹಾಗಾದರೆ ಆ ಹಣ ಎಲ್ಲಿಂದ ಬಂತು? ಎಂದು ತಿರುಗೇಟು ನೀಡಿದರು.

ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂಬ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು, ಕೋವಿಡ್ ಸಂದರ್ಭದಲ್ಲಿ ನಡೆದಿರುವ ಅವ್ಯವಹಾರದ ಕುರಿತು ನಿವೃತ್ತ ನ್ಯಾ.‌ ಮೈಕಲ್ ಕುನ್ಹಾ ನೇತೃತ್ವದ ಆಯೋಗ ನೀಡಿರುವ ವರದಿ, ಸಂಪುಟ ಉಪಸಮಿತಿ ಅಧ್ಯಯನ ಮಾಡುತ್ತಿದೆ. ಉಪಸಮಿತಿ ವರದಿ ಬಂದ ನಂತರ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇದ್ಯಾವುದೂ ಗೊಡ್ಡು ಬೆದರಿಕೆಯಲ್ಲ. ಆಯೋಗವೊಂದನ್ನು ತನಿಖೆಗೆ ರಚಿಸಿ, ಅದು ನೀಡಿದ ವರದಿಯ ಆಧಾರದ ಮೇಲೆಯೇ ಸಂಪುಟ ಉಪಸಮಿತಿಯ ಸಚಿವ ದಿನೇಶ ಗು‌ಡೂರಾವ್ ಪ್ರತಿಕ್ರಿಯೆ ನೀಡಿದ್ದು. ಮುಂದಿನ ದಿನಗಳಲ್ಲಿ ಕ್ರಿಮಿನಲ್ ವಿಚಾರಣೆ ಆರಂಭವಾದಾಗ ಅವರ ನಿಜ ಬಣ್ಣ ಏನು ಎಂಬುದು ಬಯಲಾಗಲಿದೆ ಎಂದು ಸ್ಪಷ್ಟಪಡಿಸಿದರು.

ಅವರಿಗೆ ಮಾತ್ರ ಇದೆಯೇ?

ನ್ಯಾಯಾಂಗದ ಬಗ್ಗೆ ನಂಬಿಕೆಯಿದೆ ಎನ್ನುವ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನ್ಯಾಯಾಂಗ ಯಡಿಯೂರಪ್ಪ ಅವರಿಗೆ ಮಾತ್ರ ಇದೆಯೇ? ಅದು ಇರುವುದು ನ್ಯಾಯ ಕೊಡುವುದಕ್ಕೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು. ತಪ್ಪು ಎಂದು ಸಾಬೀತಾದ ಮೇಲೆ ಯಡಿಯೂರಪ್ಪ ಏನು ಮಾಡಲು ಸಾಧ್ಯ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರ ಕೊಲೆಗೆ ಸಂಚು ನಡೆದಿದ್ದು ನಿಜವಾಗಿದ್ದರೆ, ಅಂದೇ ಯಾಕೆ ಪ್ರಕರಣ ದಾಖಲಿಸಲಿಲ್ಲ? ಅವರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆಯಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಡಾ ನಿವೇಶನ ನೋಂದಣಿಗೆ ತಹಸೀಲ್ದಾರ್ ಹಣ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪ ಸುಳ್ಳು. ತಹಸೀಲ್ದಾರ್ ಚೆಕ್ ಮೂಲಕ ಏನಾದರೂ ಹಣ ನೀಡಿದ್ದಾರೆಯೇ? ದಾನಪತ್ರ ಮಾಡಲು ನನ್ನ ಭಾಮೈದ ಹಣ ಕೊಟ್ಟಿದ್ದಾರೆ. ನಾನು, ನನ್ನ ಪತ್ನಿ ಶುಲ್ಕ ಮಾತ್ರ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

Share this article