ಮನ್ ಕಿ ಬಾತ್ ನಲ್ಲಿ ಪ್ರಧಾನಿ ಬಾಗಲಕೋಟೆ ರೈತನ ಗುಣಗಾನ

KannadaprabhaNewsNetwork |  
Published : Apr 28, 2025, 12:48 AM IST
ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಸೇಬು ಬೆಳೆದ ರೀತಿ ಹಾಗೂ ಪರಿಶ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಸೇಬು ಬೆಳೆದ ರೀತಿ ಹಾಗೂ ಪರಿಶ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.

ಭಾನುವಾರದ ಮನ್ ಕಿ ಬಾತ್ ನಲ್ಲಿ ಬಾಗಲಕೋಟೆ ರೈತನ ಯಶಸ್ಸು ಹೊಗಳಿದ ಪಿಎಂ ಮೋದಿ ಅವರು, ಮೊದಲೆಲ್ಲ ಶೀತ ವಲಯದಲ್ಲಿ ಸೇಬು ಬೆಳೆಯಲಾಗುತಿತ್ತು. ಆದರೆ ಕರ್ನಾಟಕದ ಉಷ್ಣವಲಯದಲ್ಲೂ ಸೇಬು ಬೆಳೆದಿದ್ದು ಗಮನಾರ್ಹವಾಗಿದೆ. 35 ಡಿಗ್ರಿ ಸೆಲ್ಸಿಯಸ್ ಪ್ರದೇಶದಲ್ಲಿ ಸೇಬು ಬೆಳೆದು ಲಾಭ ಪಡೆದ ರೈತನ ಯಶೋಗಾಥೆ ಕೊಂಡಾಡಿದರು.ಸಾಹಸಿ ರೈತ ಶ್ರೀಶೈಲ ತೇಲಿ:

ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಅವರು ಮೂಲತಃ ಬೆಳಗಾವಿಯ ಜಿಲ್ಲೆ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದವರು. ಕೆಲ ವರ್ಷಗಳ ಹಿಂದೆ ಕುಳಲಿ ಗ್ರಾಮದ ವ್ಯಾಪ್ತಿಯಲ್ಲಿ ಜಮೀನು ಖರೀದಿ ಮಾಡಿ ಸೇಬು ಕೃಷಿ ಮಾಡಿ ಭರ್ಜರಿ ಫಸಲು ತೆಗೆದಿದ್ದಾರೆ. ಏಳು ಎಕರೆ ಜಮೀನಿನಲ್ಲಿ 2620 ಸಸಿ ನಾಟಿ ಮಾಡಿದ್ದು, ಸಸಿಗಳ ಆರೈಕೆಗೆ ಜೀವಾಮೃತ, ಸಾವಯವ ಗೊಬ್ಬರ ಬಳಕೆ ಮಾಡಿದ್ದಾರೆ. ಮಹಾರಾಷ್ಟ್ರದ ಶಿರಡಿಯಿಂದ ಅನ್ಸಾರಿ, ಹರ್ಮನ್ 99, ಗೋಲ್ಡನ್ ಡಾಟ್ ಎಂಬ ತಳಿಯ ಸಸಿ ತಂದು ನಾಟಿ ಮಾಡಿದ್ದ ಅವರು ಮೊದ ಮೊದಲು ಪ್ರಾಯೋಗಿಕ ಬೆಳೆಯನ್ನಾಗಿ ಬೆಳೆದಿದ್ದರು. ನಂತರ ಅಧಿಕ ಇಳುವರಿ, ಕಡಿಮೆ ಖರ್ಚಿನಿಂದ ಸೇಬು ಬೆಳೆ ಕಡೆ ಗಮನ ಹರಿಸಿ ಪ್ರತಿಗಿಡಕ್ಕೆ ನೂರರಿಂದ ನೂರಿಪ್ಪತ್ತು ಹಣ್ಣುಗಳನ್ನು ಬರುವ ರೀತಿಯಲ್ಲಿ ಶ್ರಮ ವಹಿಸಿದ್ದಾರೆ.

7 ಎಕರೆಯಲ್ಲಿ 10*10 ಜಾಗದಲ್ಲಿ ಸಸಿ ನಾಟಿ ಮಾಡಿ, ಕಾಶ್ಮೀರ ಮೀರಿಸುವ ರುಚಿಯ ಸೇಬು ಬೆಳೆದು ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ತಂದಿದ್ದಾರೆ. ಜಮಖಂಡಿ, ಮಹಾಲಿಂಗಪುರ, ಮುಧೋಳ, ಬೀಳಗಿ, ರಾಯಬಾಗ ಸೇರಿದಂತೆ ಸುತ್ತಮುತ್ತಲಿನ ನಗರಪ್ರದೇಶಗಳಿಗೆ ರವಾನೆ ಮಾಡಿ, ಪ್ರತಿ ಕೆಜಿಗೆ ₹80-150 ಗೆ ಮಾರಾಟ ಮಾಡುತ್ತಿದ್ದಾರೆ.

₹150ನಂತೆ ಸಸಿ ತಂದಿದ್ದ ರೈತ ಶ್ರೀಶೈಲ ತೇಲಿ ಅವರು 2 ವರ್ಷ 1 ತಿಂಗಳ ಸಸಿಗಳಿಂದ ಸದ್ಯ 6-7 ಟನ್ ಸೇಬು ಮಾರಾಟ ಮಾಡಿದ್ದಾರೆ. ಈವರೆಗೂ ಬೆಳೆಗಳಿಗೆ ಹಾಕಿದ ಹಣ ವಾಪಸ್ ಆಗಿದ್ದು, ಇನ್ಮುಂದೆ ಲಾಭದ ನಿರೀಕ್ಷೆಯಲ್ಲಿ ರೈತ ಶ್ರೀಶೈಲ ತೇಲಿ ಇದ್ದಾರೆ.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು