ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಭಿವೃದ್ಧಿ ಎಂದರೆ ಏನು ಎಂಬ ಅರ್ಥವೇ ಗೊತ್ತಿಲ್ಲದ ಪ್ರಧಾನಿ ನರೇಂದ್ರ ಮೋದಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪ್ರಾಂತ ಕೃಷಿ ಕೂಲಿಕಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪುಟ್ಟಮಾಧು ಆರೋಪಿಸಿದರು.
ಪಟ್ಟಣದ ಕೃಷಿಕೂಲಿಕಾರರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನಿ ನರೇಂದ್ರಮೋದಿ ಪಾರ್ಲಿಮೆಂಟ್‌ನಲ್ಲಿ ಭಾರತವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಿದ್ದೇವೆಂದು ಹೇಳಿಕೆ ನೀಡಿದ್ದಾರೆ.
ಆದರೆ, ಒಂದೆಡೆ ದೇಶದಲ್ಲಿ ಬಡತನ ತೀವ್ರವಾಗಿದ್ದರೆ ಮತ್ತೊಂದೆಡೆ ಶ್ರೀಮಂತರ ಬಂಡವಾಳ ಹೆಚ್ಚಳವಾಗಿದೆ ಎಂದರು.
ಶ್ರೀ ರಾಮಮಂದಿರ ಕಟ್ಟಿಸುವುದು, ಕಾಶ್ಮಿರವನ್ನು ಭಾರತಕ್ಕೆ ಸೇರಿಸಿದೆ ಎನ್ನುವುದು ಅಭಿವೃದ್ಧಿಯಲ್ಲ. ಜನರಿಗೆ ಉದ್ಯೋಗ ನೀಡದೇ, ಬಡತನ ನಿವಾರಣೆ ಮಾಡದೇ, ಅಭಿವೃದ್ಧಿಯತ್ತ ತೆಗದುಕೊಂಡು ಹೋಗಿದ್ದೇನೆ ಎನ್ನುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.
ಖಾಸಗೀಕರಣ ವ್ಯವಸ್ಥೆಗೆ ಹೆಚ್ಚು ಆಧ್ಯತೆ ನೀಡುತ್ತಿದ್ದಾರೆ. ರೈಲು, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ ಎಲ್ಲಾ ರಸ್ತೆಗಳನ್ನು ಖಾಸಗಿಯವರಿಗೆ ಅರ್ಪಿಸುತ್ತಿರುವ ಮೂಲಕ ಬಡವರಿಗೆ ಸಿಗಬೇಕಾದ ಸೌಲಭ್ಯವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿದರು.
ದುಡಿಯುವ ಜನತೆಯ ಹಿತ ಕಾಯುವ ಪರ್ಯಾಯ ಧೋರಣೆಗಳಿಗಾಗಿ ಮತ್ತು ಸಂವಿಧಾನ ಪ್ರಜಾಪ್ರಭುತ್ವ, ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾಗಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಫೆ.16ರಂದು ದೇಶಾದ್ಯಂತ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಸಿಐಟಿಯೂ, ಕೆಪಿಆರ್‌ಎಸ್, ಎಐಎಡಬ್ಲ್ಯೂ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೆರಗೋಡಿನಲ್ಲಿ ಹನುಮಧ್ವಜ ಹಾರಾಟದ ಸಂಬಂಧ ರಾಜಕೀಯ ಕಿಚ್ಚು ಹಚ್ಚಿದ್ದ ಬಿಜೆಪಿ ಪಕ್ಷದ ನಡೆಯನ್ನು ಖಂಡಿಸುತ್ತೇವೆ. ಜಿಲ್ಲೆಯ ಜನರು ಈ ವಿಚಾರವಾಗಿ ಸೌಹರ್ಧತೆಯಿಂದ ಇರಬೇಕೆಂದು ಮನವಿ ಮಾಡಿದರು.
ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿಯಾದ ಪಕ್ಷಕ್ಕೆ ಸಿಪಿಐಎಂ ಎಂದಿಗೂ ಬೆಂಬಲಿಸುವುದಿಲ್ಲ. ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಸ್ವಷ್ಟಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಬಸವರಾಜು, ಶಿವಮಲ್ಲಯ್ಯ, ರಾಮಣ್ಣ, ಪಾಪಣ್ಣ, ಮಲ್ಲಣ್ಣ, ನಾಗರತ್ನ, ಆನಂದ್ ಸೇರಿ ಇತರರಿದ್ದರು.