ಪ್ರಧಾನಿಯಿಂದ ಜಿಲ್ಲೆಗೆ ಯೋಜನೆ ಶೀಘ್ರ ಘೋಷಣೆ: ಕೇಂದ್ರ ಸಚಿವ ವಿ.ಸೋಮಣ್ಣ

KannadaprabhaNewsNetwork |  
Published : Oct 14, 2024, 01:18 AM IST
ತುಮಕೂರಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಇನ್ನು 6-7 ತಿಂಗಳಲ್ಲಿ ಪ್ರಧಾನಿ ಮೋದಿ ತುಮಕೂರು ಜಿಲ್ಲೆಗೆ ದೊಡ್ಡ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ತುಮಕೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವದಲ್ಲಿ ಮಾತನಾಡಿದರು.

ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ತುಮಕೂರು

ಇನ್ನು 6-7 ತಿಂಗಳಲ್ಲಿ ಪ್ರಧಾನಿ ಮೋದಿ ತುಮಕೂರು ಜಿಲ್ಲೆಗೆ ದೊಡ್ಡ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ನಿರೀಕ್ಷೆ ಮಾಡಿರಲಿಲ್ಲ, ಕೇಂದ್ರ ಸರ್ಕಾರದ ಮಂತ್ರಿಯಾದೆ, ನಿರೀಕ್ಷೆ ಮಾಡದೆ ರೈಲ್ವೆ ಸಚಿವನಾದೆ. ಇದೆಲ್ಲಾ ತುಮಕೂರು ಕ್ಷೇತ್ರದ ಜನರ, ಗುರುಗಳ ಆಶೀರ್ವಾದದ ಫಲ ಎಂದರು.

ರೈಲ್ವೆ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ವೇಗ ನೀಡಲು ಪ್ರಧಾನಿ ಮೋದಿ ನೆರವಾಗಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಮುಗಿಯದೆ ಉಳಿದಿದ್ದ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗದ ಭೂಸ್ವಾಧೀನ ಕೆಲಸವನ್ನು ತೀವ್ರಗೊಳಿಸಿ ಆ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ. ಇಷ್ಟು ವರ್ಷಗಳಿಂದ ಆಗದ ತುಮಕೂರು ನಗರದ ರೈಲ್ವೆ ನಿಲ್ದಾಣವನ್ನು 88 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಿ, ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಿವ ಯೋಜನೆ ಚಾಲನೆ ಸಿಕ್ಕಿದೆ. ಇದೆಲ್ಲಾ ನಿಮ್ಮ ಆಶೀರ್ವಾದ, ನೀವು ಮತ ನೀಡಿ ಕೊಟ್ಟ ಅವಕಾಶ ಎಂದರು.

ರೈಲ್ವೆ ಇಲಾಖೆಯಲ್ಲಿ ಹಲವಾರು ಉದ್ಯೋಗಾವಕಾಶಗಳಿವೆ. ಇದೂವರೆಗೆ ಹಿಂದಿ, ಇಂಗ್ಲೀಷ್‌ನಲ್ಲಿ ನೇಮಕಾತಿ ಪರೀಕ್ಷೆಗಳನ್ನು ಬರೆಯಬೇಕಾಗಿತ್ತು. ಈಗ ಕನ್ನಡದಲ್ಲೂ ಪರೀಕ್ಷೆ ಬರೆದು ಕನ್ನಡಿಗರು ರೈಲ್ವೆ ಇಲಾಖೆಯ ವಿವಿಧ ಹಂತದ ಹುದ್ದೆಗಳನ್ನು ಪಡೆಯಬಹುದು. ಇದು ಮಹತ್ವದ ಬದಲಾವಣೆ ಅಲ್ಲವೆ? ಎಂದರು.

ರೈಲ್ವೆ ಗೇಟುಗಳನ್ನು ತೆರವು ಮಾಡಿ ಆ ಭಾಗದಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಾವಿರಾರು ಕೋಟಿ ರು. ಖರ್ಚು ಮಾಡಿ 1426 ಕಿ.ಮೀ ಉದ್ದ ಸಿಗ್ನಲ್ ರಹಿತ ಮಾರ್ಗ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ರೈಲು ಪ್ರಯಾಣಿಕರ ವೇದಿಕೆಯ ಜಿಲ್ಲೆಯ ರೈಲ್ವೆ ಅಭಿವೃದ್ಧಿಯ ಮುನ್ನೋಟದ ಕಿರು ಹೊತ್ತಿಗೆ ಹಾಗೂ ನಮ್ಮ ರೈಲು ಎಂಬ ಸ್ಮರಣ ಸಂಚಿಕೆಯನ್ನು ಸಚಿವ ವಿ.ಸೋಮಣ್ಣ ಈ ವೇಳೆ ಬಿಡುಗಡೆಗೊಳಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ರಚಿಸಿ ನಿರ್ದೇಶನ ಮಾಡಿದ ರೈಲು ಕುರಿತ ಸಾಕ್ಷಚಿತ್ರವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅನಾವರಣಗೊಳಿಸಿದರು

ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೈಲು ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವೇದಿಕೆಯ ದಶಮಾನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರೈಲು ಮತ್ತು ರೈಲಿನ ಸುರಕ್ಷತೆ ವಿಷಯದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.

ಮಾಜಿ ಸಂಸದ ಜಿ.ಎಸ್.ಬಸವರಾಜು ಅವರನ್ನು ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳಿಧರ ಹಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಬಿಜೆಪಿ ಮುಖಂಡ ಎಸ್.ಶಿವಪ್ರಸಾದ್, ಬಿ.ಕೆ.ಜಯಪ್ರಕಾಶ್, ಬಾ.ಹ.ರಮಾಕುಮಾರಿ, ಕರಣಂ ರಮೇಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!