ಎಲ್ಲೆಂದರಲ್ಲಿ ಕಸದ ರಾಶಿ, ಹೂಳುತುಂಬಿದ ಚರಂಡಿಗಳು । ಜಾಣ ಕುರುಡು ಪ್ರದರ್ಶಿಸುವ ಅಧಿಕಾರಿಗಳು ರಮೇಶ್ ಬಿದರಕೆರೆ ಕನ್ನಡಪ್ರಭ ವಾರ್ತೆ ಹಿರಿಯೂರು ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ರಸ್ತೆಗೆ ಆತುಕೊಂಡಂತೆ ಬೆಳೆದ ಗಿಡ ಗಂಟಿಗಳು, ಕುಡಿಯುವ ನೀರಿನ ಟ್ಯಾoಕ್, ಶಾಲೆ, ಆಸ್ಪತ್ರೆಯ ಬಳಿಯೂ ಕಸದ ಅಬ್ಬರ. ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ. ಆದಿವಾಲ ಗ್ರಾಮದಲ್ಲಿ ಸದ್ಯಕ್ಕೆ ಕಾಣಸಿಗುವ ದೃಶ್ಯಗಳು ಇವು. ಅನೈರ್ಮಲ್ಯದ ತವರೂರು ಆಗಿರುವ ಆದಿವಾಲ ಗ್ರಾಮ ಪಂಚಾಯ್ತಿಯತ್ತ ಕಣ್ಣಾಡಿಸಬೇಕಾದ ಅಧಿಕಾರಿಗಳಿಗೆ ಜಾಣಕುರುಡು ನೀತಿಗೆ ಅಂಟಿಕೊಂಡಿದ್ದಾರೆ. ಗ್ರಾಮದ ಬಹುತೇಕ ರಸ್ತೆಗಳ ಇಕ್ಕೆಲಗಳಲ್ಲಿ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದಿವೆ. ಚರಂಡಿಗಳಲ್ಲಿ ಹೂಳು ತುಂಬಿಕೊಂಡ ಪರಿಣಾಮ ಸೊಳ್ಳೆಗಳ ಸಂಖ್ಯೆ ವಿಪರೀತವಾಗಿದೆ. ಇಡೀ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್ ನ ಸುತ್ತಮುತ್ತ ವರ್ಷಗಳಿಂದ ಕಸ ವಿಲೇವಾರಿಯಾಗಿಲ್ಲ. ಹಂದಿ ಮತ್ತು ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಕಸ ವಿಲೇವಾರಿಯಾಗದೇ ಅಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಗ್ರಾಮದ ಶಾಲೆಗಳಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆಯಿಲ್ಲ ಎಂಬುದು ಹಳೆಯ ದೂರು. ಮೂತ್ರ ವಿಸರ್ಜನೆಗೆ ಬಯಲನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ದಲಿತ ಕಾಲೋನಿ ಬಳಿಯಿರುವ ಅಂಗನವಾಡಿ ಕೇಂದ್ರದ ಪಕ್ಕ ಗಿಡ ಗಂಟೆಗಳು ಬೆಳೆದು ನಿಂತಿವೆ. . ಕಳೆದ ನಾಲ್ಕು ವರ್ಷಗಳಿಂದ ಕಸ ಸಂಗ್ರಹಿಸುವುದಕ್ಕೆ ಮನೆ ಮನೆಗೆ ನೀಡಬೇಕಿದ್ದ ಹಸಿಕಸ, ಒಣಕಸ ಸಂಗ್ರಹದ ಬಕೆಟ್ ಗಳು ಗ್ರಾಮ ಪಂಚಾಯ್ತಿಯ ಗೋದಾಮಿನಲ್ಲಿಯೇ ಬಿದ್ದಿವೆ ಎನ್ನುತ್ತಾರೆ ಗ್ರಾಮದ ಕೆಲವರು. 15ನೇ ಹಣಕಾಸು ಯೋಜನೆಯಲ್ಲಿ ಕಸ ಸಂಗ್ರಹಿಸಲು ಪಟ್ರೆಹಳ್ಳಿ ಯಲ್ಲಿ ಜಮೀನು ಗುರುತಿಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ್ದು, ಕಸ ಸಂಗ್ರಹಿಸಲು ವಾಹನದ ವ್ಯವಸ್ಥೆಯಿದ್ದರೂ ಸಹ ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಗ್ರಾಮ ಪಂಚಾಯ್ತಿ ಏಕೆ ಮುಂದಾಗಿಲ್ಲವೆಂಬ ಪ್ರಶ್ನೆಗಳು ಮೂಡಿವೆ. ಆದಿವಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿರುವ ಮದ್ಯದ ಅಂಗಡಿಯ ಬಳಿ ಖಾಲಿ ಪೌಚುಗಳು ರಸ್ತೆಯಲ್ಲಿ ಸದಾ ರಾರಾಜಿಸುತ್ತಿರುತ್ತವೆ. ಆದಿವಾಲ ಫಾರಂ, ಪಟ್ರೆಹಳ್ಳಿಯಿಂದ ಶಾಲೆಗೆ ಬರುವ ಮಕ್ಕಳು ಆ ಮದ್ಯದ ಪೌಚುಗಳನ್ನು ದಾಟಿ ಹೋಗುವ ಪರಿಸ್ಥಿತಿ ಇದೆ. ರಸ್ತೆ ತುಂಬಾ ಹೋಟೆಲ್ ಗಳ ತ್ಯಾಜ್ಯದ ರಾಶಿ ರಾಶಿ ಕಸ ಬಿದ್ದಿದೆ. ------------ ಗ್ರಾಮದ ತುಂಬಾ ಕಸದ ರಾಶಿ ಬಿದ್ದಿದೆ. ಈ ಬಗ್ಗೆ ಹಲವು ಬಾರಿ ಪಂಚಾಯ್ತಿಯವರ ಗಮನಕ್ಕೆ ತರಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲದ ಕಾರಣ ಅಕ್ಟೊಬರ್ 2ರ ಗಾಂಧಿ ಜಯಂತಿಯಂದು ಗ್ರಾಮ ಪಂಚಾಯಿತಿ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿಯವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಗ್ರಾಮದ ಶಾಲೆ, ಆಸ್ಪತ್ರೆ ಮತ್ತು ನೀರಿನ ಟ್ಯಾಂಕ್ ಬಳಿ ಕಳೆದ ಹಲವಾರು ದಿನಗಳಿಂದ ಕಸ ವಿಲೇವಾರಿ ಮಾಡದ ಪರಿಣಾಮ ವಿಷಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಆದಷ್ಟು ಬೇಗ ಗಮನಹರಿಸಿ ಆರೋಗ್ಯವಂತ ಗ್ರಾಮವನ್ನಾಗಿಸಲು ಅಧಿಕಾರಿಗಳು ಪ್ರಯತ್ನಿಸಬೇಕು. - ಚಮನ್ ಷರೀಫ್, ಸಾಮಾಜಿಕ ಕಾರ್ಯಕರ್ತ --------------------