----------ಕನ್ನಡಪ್ರಭ ವಾರ್ತೆ ಹುಣಸೂರು ಪ್ರಕೃತಿಗೆ ಪೂರಕವಾಗಿ ಸಂಸ್ಕೃತಿಯನ್ನು ಉಳಿಸಿಕೊಂಡು ಬದುಕದೇ ವಿಕೃತ ಮನಸ್ಥಿತಿಯನ್ನು ತಲುಪಿರುವುದೇ ಮಾನವ ಕಳ್ಳಸಾಗಣೆಯಂತಹ ಪಡಂಭೂತ ಸಮಾಜವನ್ನು ಕಾಡುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಪಿ. ಮಜಿದ್ ಅಭಿಪ್ರಾಯಪಟ್ಟರು.ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮುಂತಾದ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯ ಮನುಷ್ಯನ ಮೇಲೆ ದೌರ್ಜನ್ಯವೆಸಗುತ್ತಿದ್ದಾನೆ. ಹೆಣ್ಣು ಮಕ್ಕಳು ಭೋಗದ ವಸ್ತುಗಳಾಗಿ ಮಾತ್ರ ಕಾಣಿಸುತ್ತಿದ್ದಾರೆ. ಮಕ್ಕಳನ್ನೂ ಮನುಷ್ಯ ಬಿಡುತ್ತಿಲ್ಲ. ಇಂತಯ ಪರಿಸ್ಥಿತಿಗೆ ನಮ್ಮ ಮನಸೇ ಕಾರಣ. ಆಧುನಿಕತೆ, ತಂತ್ರಜ್ಞಾನ, ಮೊಬೈಲ್ ಬಳಕೆ ಎಲ್ಲವೂ ನಮ್ಮಲ್ಲಿನ ಸಂಸ್ಕಾರ, ಸಂಸ್ಕೃತಿಗೆ ವಿರುದ್ಧವಾಗಿದೆ. ಮಾನವ ಕಳ್ಳಸಾಗಣೆಯಂತಹ ಪ್ರಕರಣಗಳನ್ನು ಗಮನಿಸಿದರೆ ತಾಲೂಕು ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ಕಾನೂನು ಸಹಕಾರ ಪಡೆಯಬಹುದಾಗಿದೆ ಎಂದರು.ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಮುನಿಯಪ್ಪ ಮಾತನಾಡಿ, ಮಾನವ ಕಳ್ಳಸಾಗಣೆ ನಾಲ್ಕು ಕಾರಣಗಳಿಗೆ ನಡೆಯುತ್ತದೆ. ವೇಶ್ಯಾವಾಟಿಕೆ, ಕೂಲಿ ಕಾರ್ಮಿಕರಾಗಿ ಬಳಕೆ, ಭಿಕ್ಷಾಟನೆ ಮತ್ತು ಅಂಗಾಂಗ ಕಳ್ಳತನಕ್ಕಾಗಿ ನಡೆದಿದೆ. ಹೆಣ್ಣು ಮಕ್ಕಳು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಐಹಿಕ ಭೋಗಗಳ ಆಮಿಷಕ್ಕೆ ಒಳಗಾಗಿ ನಿಮಗೆ ನೀವೇ ಕಳ್ಳಸಾಗಣೆಗೆ ಒಳಗಾಗುತ್ತಿದ್ದೀರಿ ಎನ್ನುವ ಅರಿವು ನಿಮಗಿರಲಿ. ಮೊಬೈಲ್ ನಿಮ್ಮ ಜೀವನ ಶೈಲಿಯನ್ನು ನಿರ್ಧರಿಸುತ್ತಿದೆ ಎನ್ನುವಂತಾಗಿದೆ. ಮಾನವ ಕಳ್ಳಸಾಗಣೆಯಂತ ಹೇಯಕೃತ್ಯಗಳಿಗೆ ಅಂತ್ಯಯಾಡಲು ಹೆಣ್ಣು ಮಕ್ಕಳು ಅತ್ಯಂತ ಎಚ್ಚರಿಕೆ ಮತ್ತು ಧೈರ್ಯದಿಂದ ಬದುಕಬೇಕಿದೆ. ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಅಗತ್ಯವೆಂದರು.ವಕೀಲೆ ಆರ್.ಎಸ್. ಪವಿತ್ರಾ ಮಾತನಾಡಿ, ಸಿಟಾ ಮತ್ತು ಪಿಟಾ ಕಾಯ್ದೆಗಳು, ಪೋಕ್ಸೋ ಕಾಯ್ದೆ, ಸಹಾಯವಾಣಿಗಳು, ಸಂವಿಧಾನಬದ್ಧ ಹಕ್ಕುಗಳು ಮತ್ತು ಕಾನೂನಾತ್ಮಕ ಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಎಸಿಡಿಪಿಒ ಸೋಮಯ್ಯ, ವಕೀಲರ ಸಂಘದ ಕಾರ್ಯದರ್ಶಿ ಸಂದೀಪ್, ಗ್ರಾಮಾಂತರ ಠಾಣೆ ಪಿಎಸ್‌ಐ ರಾಧಾ, ಟ್ಯಾಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಆಶಾ ಮತ್ತು ಆಂಗನವಾಡಿ ಕಾರ್ಯಕರ್ತೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಸಂಘಗಳ ಸದಸ್ಯರು ಇದ್ದರು.