ಕುಡಿಯುವ ನೀರಿಗೆ ಆದ್ಯತೆ ನೀಡಿ, ನಿರ್ಲಕ್ಷ್ಯ ವಹಿಸಿದರೆ ಕಠಿಣಕ್ರಮ: ಸಿಎಂ ಎಚ್ಚರಿಕೆ

KannadaprabhaNewsNetwork | Published : Mar 6, 2024 2:15 AM

ಸಾರಾಂಶ

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ಮಂಗಳವಾರ ವಿಡಿಯೋ ಸಂವಾದದ ಮೂಲಕ ರಾಜ್ಯದಲ್ಲಿ ಬರದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಕರ್ನಾಟಕದಲ್ಲಿ ಈ ಸಲ ಭಾರೀ ಪ್ರಮಾಣದ ಬರದ ಲಕ್ಷಣಗಳಿವೆ. ಹೀಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಎಲ್ಲ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ಮಂಗಳವಾರ ವಿಡಿಯೋ ಸಂವಾದದ ಮೂಲಕ ರಾಜ್ಯದಲ್ಲಿ ಬರದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.

ಮಾರ್ಚ್‌, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರ ಪರಿಸ್ಥಿತಿ ಎದುರಿಸಬೇಕು. ಮೈಸೂರು ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ನಿರೀಕ್ಷೆ ಇಲ್ಲ. ಅದಕ್ಕಾಗಿ ಅಧಿಕಾರಿಗಳು ಈಗಿನ ಪರಿಸ್ಥಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಮುಂದಿನ ಪರಿಸ್ಥಿಯನ್ನು ಸಮಸ್ಯೆಗಳಿಲ್ಲದೆ ನಿಭಾಯಿಸಲು ಯೋಜನೆಗಳನ್ನು ರೂಪಿಸಿ, ಕಾರ್ಯಪ್ರವೃತ್ತರಾಗಿ. ಜನರಿಗೆ ತೊಂದರೆ ಆದರೆ ಆಯಾ ಜಿಲ್ಲೆಯ ಡಿಸಿ, ಎಸಿ ಮತ್ತು ತಹಸೀಲ್ದಾರರನ್ನು ಜವಾಬ್ದಾರರನ್ನಾಗಿ ಮಾಡುತ್ತೇನೆ. ಕೆಲಸ ಸಿಕ್ಕಿಲ್ಲವೆಂದು ಗುಳೆ ಹೋಗಬಾರದು. ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳು, ಸಿಇಒಗಳು ತಮ್ಮ ಜಿಲ್ಲೆಯ ತಹಸೀಲ್ದಾರ, ಆರ್‌ಐ, ವಿ.ಎ ಮತ್ತು ಪಿಡಿಒಗಳ ಜೊತೆ ಸಭೆ ಜರುಗಿಸಬೇಕು. ಕ್ಷೇತ್ರಮಟ್ಟದ ಸಮಸ್ಯೆಗಳನ್ನು ಸ್ವತಃ ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಕ್ರಮವಹಿಸಿ, ಜಿಲ್ಲೆಯಿಂದ ಮೇವು ಹೊರ ಹೋಗದಂತೆ ಆದೇಶಿಸಿ. ಕೃಷಿ, ಕುಡಿಯುವ ನೀರಿಗೆ ತಡೆರಹಿತ ವಿದ್ಯುತ್ ನೀಡಬೇಕು ಮತ್ತು ಕುಡಿಯುವ ನೀರಿಗಾಗಿ ಹೊಸ ಬೋರ್‌ವೆಲ್ ಕೊರೆಸಿದಾಗ ತಕ್ಷಣ ವಿದ್ಯುತ್‌ ಸಂಪರ್ಕ ಕೊಡಲು ಕೆಪಿಟಿಸಿಎಲ್ ಕ್ರಮ ವಹಿಸಬೇಕು. ದಾಖಲಾತಿ, ಅನುಮತಿ ನೆಪದಲ್ಲಿ ವಿಳಂಬ ಮಾಡಿದರೆ ಕರ್ತವ್ಯ ಲೋಪವೆಂದು ತಿಳಿದು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಈ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, 2023ರ ಮುಂಗಾರು ವಿಫಲತೆ ಹಿನ್ನಲೆಯಲ್ಲಿ ಬೆಳೆ ಹಾನಿಗಾಗಿ ಸರ್ಕಾರ ಪ್ರತಿ ರೈತನಿಗೆ ಬೆಳೆಹಾನಿಗಾಗಿ ಬಿಡುಗಡೆ ಮಾಡಿರುವ ₹2 ಸಾವಿರ ಮಧ್ಯಂತರ ಪರಿಹಾರಧನ ಮಾ. 5ರ ವರೆಗೆ ಜಿಲ್ಲೆಯ 1,01,584 ಜನ ರೈತರಿಗೆ ಒಟ್ಟು ₹19.82 ಕೋಟಿ ಹಣ ಜಮೆ ಆಗಿದೆ. ಬಾಕಿ ಉಳಿದ ರೈತರಿಗೂ ಹಂತಹಂತವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆ ಆಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಅಲ್ಲದೇ, ಜನುವಾರುಗಳಿಗೆ ಮೇವು ಕೊರತೆ ಇರುವುದಿಲ್ಲ ಎಂಬ ಮಾಹಿತಿ ನೀಡಿದರು.

Share this article