ಹೊಸಪೇಟೆ: ರಾಜ್ಯದಲ್ಲಿ ಜನಸಂಖ್ಯೆಯ ಆಧಾರದಲ್ಲಿ ಸುಮಾರು 2.7 ಲಕ್ಷ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಬೇಕಿತ್ತು. ಆದರೆ ಪ್ರಸ್ತುತ ಕೇವಲ 1.7 ಲಕ್ಷ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಕುರಿತು ಇಲಾಖೆಗಳ ಬಳಿ ನಿಖರ ಮತ್ತು ಸ್ಪಷ್ಟ ದತ್ತಾಂಶದ ಕೊರತೆಯಿದೆ. ಅಧಿಕಾರಿಗಳು ತಕ್ಷಣವೇ ನಿಖರವಾದ ಮಾಹಿತಿ ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ತಿಳಿಸಿದರು.
2011ರ ಶೈಕ್ಷಣಿಕ ಸರ್ವೇ ವರದಿಯನ್ನು ಉಲ್ಲೇಖಿಸಿದ ಅವರು, ಅಲ್ಪಸಂಖ್ಯಾತ ಸಮುದಾಯದಲ್ಲಿ ಕೇವಲ ಶೇ.42.73ರಷ್ಟು ವಿದ್ಯಾರ್ಥಿಗಳು ಮಾತ್ರ ಸಾಕ್ಷರತೆ ಪ್ರಮಾಣ ಹೊಂದಿರುವುದು ಆತಂಕ ಮೂಡಿಸಿದೆ. ಮಕ್ಕಳ ಭವಿಷ್ಯವನ್ನು ಕಸಿಯುತ್ತಿರುವ ಪೋಷಕರಲ್ಲಿ ಶಿಕ್ಷಣದ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು. ಜಿಲ್ಲೆಯ ಯಾವೊಬ್ಬ ವಿದ್ಯಾರ್ಥಿಯೂ ಶಾಲೆಯಿಂದ ಹೊರಗುಳಿಯದಂತೆ ಇಲಾಖೆಗಳು ಕಟ್ಟೆಚ್ಚರ ವಹಿಸಬೇಕು ಎಂದು ಅವರು ತಾಕೀತು ಮಾಡಿದರು.
ಶಿಕ್ಷಕರ ಕೊರತೆ ನೀಗಿಸಲು ಹೊರಗುತ್ತಿಗೆ ನೇಮಕಾತಿ:ಜಿಲ್ಲಾದ್ಯಂತ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ, ಅಗತ್ಯಕ್ಕೆ ಅನುಗುಣವಾಗಿ ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ವಿಶೇಷ ಕಾರ್ಯದರ್ಶಿ ಮುಜೀಬುಲ್ಲಾ ಖಾನ್, ಎಸ್ಪಿ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಪ್ರಗತಿ ಪರಿಶೀಲನಾ ಸಭೆ ಆರಂಭಕ್ಕೂ ಮುನ್ನ ಅಲ್ಪಸಂಖ್ಯಾತರ ಸಮುದಾಯದವರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸಿದರು.