ಬಳ್ಳಾರಿ: ಮಕ್ಕಳು ಕೇವಲ ಪಠ್ಯಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗದೆ, ಸುತ್ತಮುತ್ತಲಿನ ಸಮಸ್ಯೆ ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಗುಣ, ತಾರ್ಕಿಕ ಚಿಂತನೆ ಹಾಗೂ ಹೊಸ ಆವಿಷ್ಕಾರಗಳತ್ತ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಹೊಸಮನಿ ಹೇಳಿದರು.
ಇಂದಿನ ಮಕ್ಕಳೇ ನಾಳಿನ ವಿಜ್ಞಾನಿಗಳು ಹಾಗೂ ದೇಶದ ಭವಿಷ್ಯವಾಗಿದ್ದಾರೆ. ಮಕ್ಕಳಲ್ಲಿ ಸಾಕಷ್ಟು ಸುಪ್ತ ಪ್ರತಿಭೆ ಅಡಗಿದ್ದು, ಅದನ್ನು ಹೊರತರಲು ಇಂತಹ ವಿಜ್ಞಾನ ಸಮಾವೇಶ ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯ ಕುತೂಹಲದಿಂದ ಗಮನಿಸಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆ ಮತ್ತು ಹೊಸ ಆವಿಷ್ಕಾರ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಹಾಗೂ ಸಂಶೋಧನಾ ಮನೋಭಾವ ಉತ್ತೇಜಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ. ಮಕ್ಕಳು ಸಿದ್ಧಪಡಿಸಿರುವ ವೈಜ್ಞಾನಿಕ ಮಾದರಿ ಮತ್ತು ಯೋಜನೆಗಳು ಭವಿಷ್ಯದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.60 ತಂಡಗಳ ಭಾಗಿ: ಜಿಲ್ಲೆಯ ವಿವಿಧ ಶಾಲೆಗಳ ಕಿರಿಯ ವಿಭಾಗದ 25 ಹಾಗೂ ಹಿರಿಯ ವಿಭಾಗದ 35 ತಂಡಗಳು ಸೇರಿದಂತೆ ಒಟ್ಟು 60 ತಂಡಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. ಪ್ರತಿ ತಂಡದಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡು ತಮ್ಮ ವೈಜ್ಞಾನಿಕ ಪ್ರಬಂಧ, ಮಾದರಿ ಹಾಗೂ ಯೋಜನೆ ಪ್ರದರ್ಶಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಶ್ರೀರಾಮಚಂದ್ರ ರೆಡ್ಡಿ, ತಾಂತ್ರಿಕ ಸಹಾಯಕ ಎಸ್. ಏಕಾಂತ ರೆಡ್ಡಿ ಹಾಗೂ ಕೆಎಸ್‌ಸಿಎಸ್‌ಟಿ ಬೆಂಗಳೂರು ಯೋಜನಾ ಸಂಯೋಜಕ ಪಿ. ಸಂಜೀವ್ ಕುಮಾರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.