ಗ್ರಾಮ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಿ: ಬಸವಂತಪ್ಪ ಸೂಚನೆ

KannadaprabhaNewsNetwork |  
Published : Feb 04, 2025, 12:34 AM IST
ಕ್ಯಾಪ್ಷನ3ಕೆಡಿವಿಜಿ37ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಪಂನ ಹಿರೇತೊಗಲೇರಿ ಗ್ರಾಮದಲ್ಲಿ 2.48 ಕೋಟಿ ರೂ. ವೆಚ್ಚದ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಆರೋಗ್ಯ ಮತ್ತು ಸ್ವಚ್ಛತೆ ಒಂದೇ ನಾಣ್ಯದ ಎರಡು ಮುಖಗಳು. ಸ್ವಚ್ಛತೆ ಹೊರತಾಗಿ ಆರೋಗ್ಯ ಇರಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಮ ನೈರ್ಮಲ್ಯಕ್ಕೆ ಗ್ರಾಮಸ್ಥರು ಹೆಚ್ಚು ಆದ್ಯತೆ ನೀಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

- ಹಿರೇತೊಗಲೇರಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಭೂಮಿಪೂಜೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಆರೋಗ್ಯ ಮತ್ತು ಸ್ವಚ್ಛತೆ ಒಂದೇ ನಾಣ್ಯದ ಎರಡು ಮುಖಗಳು. ಸ್ವಚ್ಛತೆ ಹೊರತಾಗಿ ಆರೋಗ್ಯ ಇರಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಮ ನೈರ್ಮಲ್ಯಕ್ಕೆ ಗ್ರಾಮಸ್ಥರು ಹೆಚ್ಚು ಆದ್ಯತೆ ನೀಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರ್ಕಿ ಗ್ರಾಮ ಪಂಚಾಯಿತಿಯ ಹಿರೇತೊಗಲೇರಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಎಂಜಿನಿಯರಿಂಗ್ ವಿಭಾಗದಿಂದ 2023-2024ನೇ ಸಾಲಿನ ಎಸ್‌ಬಿಎಂಜಿ ಯೋಜನೆಯಡಿ ಮಂಜೂರಾಗಿರುವ ₹2.48 ಕೋಟಿ ವೆಚ್ಚದ ತಾಲೂಕುಮಟ್ಟದ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹಿರೇತೊಗಲೇರಿ ಗ್ರಾಮದ 2 ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ. ತಾಲೂಕಿನ ಒಣಕಸ ಸಂಗ್ರಹಿಸಿ ಇಲ್ಲಿನ ಒಣಕಸ ನಿರ್ವಹಣಾ ಘಟಕ ಮೂಲಕ ಪ್ಲಾಸ್ಟಿಕ್, ಕಬ್ಬಿಣ, ಗಾಜು ಇತ್ಯಾದಿಗಳನ್ನು ವಿಂಗಡಿಸಿ, ಪುನರ್ ಉತ್ಪಾದನೆ ಮಾಡುವ ಉದ್ದಿಮೆದಾರರಿಗೆ ಕಳುಹಿಸಲಾಗುತ್ತದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕ್ಷೇತ್ರದ ಬಹುತೇಕ ಗ್ರಾಪಂಗಳಲ್ಲಿ ಘಟಕಗಳು ನನೆಗುದಿಗೆ ಬಿದ್ದಿವೆ. ಕೆಲವೊಂದು ಗ್ರಾಪಂಗಳಲ್ಲಿ ಕಸ ವಿಲೇವಾರಿ ಘಟಕಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕಸ ಸಂಗ್ರಹಿಸುವ ಆಟೋಗಳು ಮೂಲೆ ಸೇರಿ ತುಕ್ಕು ಹಿಡಿಯುತ್ತಿವೆ. ಕುರ್ಕಿ ಗ್ರಾಮದ ಕಸ ವಿಲೇವಾರಿ ಘಟಕವನ್ನು ಇಲ್ಲಿನ ಗ್ರಾಪಂ ಪಿಡಿಒ, ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ವರ್ಗ ಸುಸ್ಥಿತಿಯಲ್ಲಿ ಇಟ್ಟುಕೊಂಡು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದರು.

ಕುರ್ಕಿ ಗ್ರಾಪಂ ಇತರೆ ಗ್ರಾಪಂಗಳಿಗೆ ಮಾದರಿಯಾಗಿದೆ. ಈ ಸಾಧನೆ ಸೂತ್ರಗಳನ್ನು ಎಲ್ಲ ಗ್ರಾಪಂ ಪಿಡಿಒಗಳು, ಅಧ್ಯಕ್ಷರು, ಸದಸ್ಯರು, ಅಳವಡಿಸಿಕೊಳ್ಳಬೇಕು. ಸಂಬಂಧಪಟ್ಟ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಆಗಾಗ ಭೇಟಿ ನೀಡಿ, ಘಟಕಗಳು ಸಮರ್ಪಕ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಗ್ರಾಮ ಸ್ವಚ್ಛತೆಗಾಗಿ ಸರ್ಕಾರ ಪ್ರತ್ಯೇಕ ಅನುದಾನ ನೀಡುತ್ತಿದ್ದು, ಇದನ್ನು ಗ್ರಾಪಂಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಗರ, ಪಟ್ಟಣಗಳಂತೆ ಗ್ರಾಮೀಣ ಪ್ರದೇಶದಲ್ಲೂ ಪ್ರತಿನಿತ್ಯ ಸ್ವಚ್ಛತೆ ಮಾಡಲು ಪೌರಕಾರ್ಮಿಕರ ನೇಮಿಸಬೇಕೆಂದು ಈ ಹಿಂದೆ ನಡೆದ ಅಧಿವೇಶನದಲ್ಲಿ ಚರ್ಚೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಪ್ರತಿದಿನ ಸ್ವಚ್ಛತೆ ಮಾಡಿ, ಗ್ರಾಮದ ಸೌಂದರ್ಯವನ್ನೂ ಕಾಪಾಡುವ ಕೆಲಸ ಆಗಬೇಕಾಗಿದೆ ಎಂದರು.

ಪಂಚಾಯತ್ ರಾಜ್ ಇಲಾಖೆ ಇಇ ಟಾಟಾ ಶಿವನ್, ಎಇಇ ಶಿವಮೂರ್ತಿ, ಗ್ರಾಪಂ ಅಧ್ಯಕ್ಷರಾದ ನಾಗಮ್ಮ, ಗ್ರಾಪಂ ಪಿಡಿಒ ಸುರೇಖಾ, ಗ್ರಾಪಂ ಸದಸ್ಯರು, ಮುಖಂಡರಾದ ನಿಂಗಪ್ಪ, ಬಸವರಾಜಪ್ಪ, ರಾಜಪ್ಪ, ವಾಸು, ಗ್ರಾಮಸ್ಥರು ಉಪಸ್ಥಿತರಿದ್ದರು.

- - - -3ಕೆಡಿವಿಜಿ37:

ದಾವಣಗೆರೆ ತಾಲೂಕಿನ ಹಿರೇತೊಗಲೇರಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಸುಸ್ಥಿರ, ಬಹುಶಿಸ್ತೀಯ ಸಂಶೋಧನೆ ಅವಶ್ಯಕ: ಸಿದ್ದು ಅಲಗೂರ
ಟಿಕೆಟ್ ರಹಿತ ಪ್ರಯಾಣ: 8 ತಿಂಗಳಲ್ಲಿ ನೈಋತ್ಯ ರೈಲ್ವೆಯಿಂದ ₹ 45 ಕೋಟಿ ದಂಡ ವಸೂಲಿ