ಸ್ವಾಭಾವಿಕ ಹೆರಿಗೆಗೆ ಆದ್ಯತೆ ನೀಡಿ, ಸಿಜೇರಿಯನ್ ತಪ್ಪಿಸಿ: ಪಾಂಡೆ

KannadaprabhaNewsNetwork |  
Published : Aug 01, 2026, 01:45 AM IST
ಕ್ಯಾಪ್ಷನ31ಕೆಡಿವಿಜಿ49 ದಾವಣಗೆರೆ ಜಿಪಂ ಸಭಾಂಗಣದಲ್ಲಿ  ಪಂಕಜ್ ಕುಮಾರ್ ಪಾಂಡೆ ಅಧ್ಯಕ್ಷತೆಯಲ್ಲಿ  ಪ್ರಗತಿ ಪರಿಶೀಲನಾ ಸಭೆ ನಡೆಯಿತು.  | Kannada Prabha

ಸಾರಾಂಶ

ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗಳು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ತೀರಾ ಅಗತ್ಯವಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬೇಕು. ಅನಗತ್ಯವಾಗಿ ಸಿ-ಸೆಕ್ಷನ್ ಮಾಡುವುದನ್ನು ತಡೆದು, ಸಾಮಾನ್ಯ ಹೆರಿಗೆಗಳಿಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಈ ಪ್ರಮಾಣದಲ್ಲಿ ಸ್ಪಷ್ಟ ಸುಧಾರಣೆ ಕಾಣಿಸಬೇಕು ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

- ಜಿಪಂ ಸಭಾಂಗಣದಲ್ಲಿ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗಳು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ತೀರಾ ಅಗತ್ಯವಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬೇಕು. ಅನಗತ್ಯವಾಗಿ ಸಿ-ಸೆಕ್ಷನ್ ಮಾಡುವುದನ್ನು ತಡೆದು, ಸಾಮಾನ್ಯ ಹೆರಿಗೆಗಳಿಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಈ ಪ್ರಮಾಣದಲ್ಲಿ ಸ್ಪಷ್ಟ ಸುಧಾರಣೆ ಕಾಣಿಸಬೇಕು ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳ ಸಿ-ಸೆಕ್ಷನ್ ಪ್ರಮಾಣ ದಿನದಿಂದ ದಿನಕ್ಕೆ ಶೇ.45 ರಿಂದ 48ರಷ್ಟು ಹೆಚ್ಚಿದೆ. ಜಗಳೂರು ಮತ್ತು ಹೊನ್ನಾಳಿ ಭಾಗಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಿ-ಸೆಕ್ಷನ್ ಹೆರಿಗೆಗಳು ಹಗಲಿನಲ್ಲಿಯೇ ನಡೆದಿದ್ದು, ರಾತ್ರಿ ವೇಳೆಯಲ್ಲಿ ಈ ಪ್ರಮಾಣ ಕೇವಲ ಶೇ.0 ರಿಂದ 5 ರಷ್ಟಿದೆ. ವಿಶೇಷವಾಗಿ, ರಾತ್ರಿ ವೇಳೆಗಿಂತ ಹೆಚ್ಚಾಗಿ ಹಗಲಿನಲ್ಲಿಯೇ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದೇಕೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸೂರ್ಯ ಉದಯವಾದಾಗಷ್ಟೇ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತವಾ? ಸೂರ್ಯ ಮುಳುಗಿದ ಮೇಲೆ ಹೆರಿಗೆ ಶಸ್ತ್ರಚಿಕಿತ್ಸೆಗಳು ನಿಂತು ಹೋಗುತ್ತವಾ? ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಕೇವಲ ಹಗಲಿನಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿ, ರಾತ್ರಿ ವೇಳೆ ಕರ್ತವ್ಯದಿಂದ ಜಾರಿಕೊಳ್ಳುವ ಮನೋಭಾವ ವೈದ್ಯರಲ್ಲಿದೆಯೇ ಎಂದರು.

ವಿಶೇಷವಾಗಿ ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲೂಕುಗಳ ಆಸ್ಪತ್ರೆಗಳಲ್ಲಿ ಸಂಜೆ 4ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಹೆಚ್ಚಿನ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ವೈದ್ಯರು ರಾತ್ರಿ ವೇಳೆ ಕರ್ತವ್ಯದಲ್ಲಿರಲು ಇಷ್ಟಪಡದೇ ಅಥವಾ ಮನೆಗೆ ಬೇಗ ಹಿಂತಿರುಗುವ ಉದ್ದೇಶದಿಂದ ಸಮಯಕ್ಕಿಂತ ಮುಂಚಿತವಾಗಿಯೇ ಹೆರಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು.

ಸಂಜೆ 4 ರಿಂದ ರಾತ್ರಿ 10 ಗಂಟೆ ಅವಧಿಯಲ್ಲಿ ನಡೆದಿರುವ ಎಲ್ಲ ಸಿ-ಸೆಕ್ಷನ್‌ಗಳನ್ನು ವೈದ್ಯಕೀಯ ಆಡಿಟ್‌ಗೆ ಒಳಪಡಿಸಿ. ಈ ಹೆರಿಗೆಗಳು ವೈದ್ಯಕೀಯವಾಗಿ ನಿಜಕ್ಕೂ ಅಗತ್ಯವಾಗಿದ್ದವೇ ಅಥವಾ ಸಮಯ ಉಳಿಸಲು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿನ 4 ಖಾಸಗಿ ನರ್ಸಿಂಗ್‌ ಹೋಂಗಳಲ್ಲಿ ಶೇ.100ರಷ್ಟು ಶಸ್ರ್ತಚಿಕಿತ್ಸೆ ಮೂಲಕ ಹೆರಿಗೆ ಮಾಡುತ್ತಿದ್ದಾರೆ, ಕೆಲವು ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಶೇ.70 ರಿಂದ 100ರಷ್ಟು ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳನ್ನು ಕರೆಸಿ ಸಭೆ ನಡೆಸಿ, ಎಚ್ಚರಿಕೆ ನೀಡಲಾಗಿದೆ ಎಂದರು.

ಗೃಹ ಆರೋಗ್ಯ ಯೋಜನೆ- ಮತ್ತು ಔಷಧಗಳ ಪೂರೈಕೆ:

ಗೃಹ ಆರೋಗ್ಯ ಯೋಜನೆಯಡಿ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಔಷಧ ದಾಸ್ತಾನು ಇಟ್ಟುಕೊಳ್ಳಬಾರದು. ರೋಗಿಗಳ ಮನೆಗೆ ನೇರವಾಗಿ ಹಾಗೂ ನಿಖರವಾಗಿ ಔಷಧಗಳು ತಲುಪುವಂತೆ ಕ್ರಮವಹಿಸಬೇಕು. ಔಷಧಗಳನ್ನು ತಾಲೂಕು ಆಸ್ಪತ್ರೆಗಳಿಗೆ ಮರುಹಂಚಿಕೆ ಮಾಡಲು ತಿಳಿಸಿದರು.

ವಿದ್ಯಾರ್ಥಿ ಆರೋಗ್ಯ ಯೋಜನೆ:

ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಮಾತನಾಡಿ, ಜಿಲ್ಲೆಯ ಸುಮಾರು 20,000 ಹಾಸ್ಟೆಲ್ ವಿದ್ಯಾರ್ಥಿಗಳ (ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿನಿಯರು) ಆರೋಗ್ಯ ರಕ್ಷಣೆಗೆ ''''ವಿದ್ಯಾರ್ಥಿ ಆರೋಗ್ಯ ಕಾರ್ಡ್'''''''' ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಹಾಸ್ಟೆಲ್‌ಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಟ್ಯಾಗ್ ಮಾಡಲಾಗಿದ್ದು, ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದರೊಂದಿಗೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ತಡೆ ಹಾಗೂ ಪೌಷ್ಟಿಕ ಆಹಾರದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಕ್ತಹೀನತೆ ನಿರ್ಮೂಲನೆಗೆ ಒತ್ತು:

ಹರಿಹರ ಸೇರಿದಂತೆ ವಿವಿಧ ಭಾಗಗಳಲ್ಲಿ ರಕ್ತಹೀನತೆ ಪ್ರಕರಣಗಳನ್ನು ಗುರುತಿಸಲಾಗಿದ್ದು, ಗಂಭೀರ ಸ್ವರೂಪದ ಈ ಅನಿಮಿಯಾ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಮಧ್ಯಮ ಸ್ವರೂಪದ ಅನಿಮಿಯಾ ಪೀಡಿತರಿಗೂ ಸೂಕ್ತ ಜಾಗೃತಿ ಮತ್ತು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ಬೆಂಗಳೂರು ವಿಭಾಗದ ಸಹ ನಿರ್ದೇಶಕ ಡಾ.ರವಿ ಆರ್, ಉಪ ನಿರ್ದೇಶಕ ಡಾ.ಚಂದ್ರಶೇಖರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಧು ಕೆ.ಎಸ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ದೇವೆಂದ್ರಪ್ಪ, ಆರ್.ಸಿ.ಎಚ್. ಅಧಿಕಾರಿ ಡಾ.ರೇಣುಕಾರಾಧ್ಯ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

- - -

-31ಕೆಡಿವಿಜಿ49:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ಪಂಕಜ್ ಕುಮಾರ್ ಪಾಂಡೆ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವೇರಿ: ರಾಜ್ಯದ ಮುಂದಿರುವ ಆಯ್ಕೆ ಬಗ್ಗೆ ತೀವ್ರ ಚರ್ಚೆ
ಇಂದೂ ನಡೆಯಲಿದೆ ಸಂಪುಟ ವಿಸ್ತರಣೆ ಸರ್ಕಸ್‌!