ಕನ್ನಡಪ್ರಭ ವಾರ್ತೆ ಚನ್ನಗಿರಿ
ಪುರಸಭೆಯ 2024-25ನೇ ಸಾಲಿನ ಆಯ-ವ್ಯಯದ ಬಜೆಟ್ ಮಂಡನಾ ಸಭೆ ಗುರುವಾರ ಪುರಸಭೆ ಸಭಾಂಗಣದಲ್ಲಿ ಆಡಳಿತಾಧಿಕಾರಿ, ಉಪ ವಿಭಾಗಾಧಿಕಾರಿ ಅಭಿಷೇಕ್ ಅಧ್ಯಕ್ಷತೆಯಲ್ಲಿ ನಡೆದು ಪ್ರಸ್ತುತ ವರ್ಷದಲ್ಲಿ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಕಳೆದು ₹60.91 ಲಕ್ಷ ಉಳಿತಾಯವಾಗಿದೆ ಎಂದು ಆಡಳಿತಾಧಿಕಾರಿ ಘೋಷಿಸಿದರು.ಪುರಸಭೆ ಆದಾಯದ ಮೂಲವಾಗಿ ಎಸ್.ಎಫ್.ಸಿ ವೇತನ ಅನುದಾನ ಸೇರಿ ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ ಶುಲ್ಕ, ಹೊಸ ಬಡಾವಣೆಗಳ ಅಭಿವೃದ್ಧಿ ಶುಲ್ಕಗಳು ಎಸ್.ಡಬ್ಲ್ಯುಎಂನಿಂದ ಬರುವ ಆದಾಯ, ಪೆಟ್ಟಿಗೆ ಅಂಗಡಿಗಳು, ವಾರದ ಸಂತೆ, ಸ್ಥಳೀಯ ಸಂಪನ್ಮೂಲದ ಸಂಗ್ರಹ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಅನುದಾನ ಸೇರಿ 36 ಬಾಬ್ತುಗಳಿಂದ ಒಟ್ಟು ಆದಾಯವಾಗಿ 26 ಕೋಟಿ 18 ಲಕ್ಷದ 31ಸಾವಿರ ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ. ಪಟ್ಟಣದ ಅಭಿವೃದ್ಧಿಗಾಗಿ ಉದ್ಯಾನವನಗಳ ಅಭಿವೃದ್ಧಿ, ಸ್ಮಶಾನಗಳ ನಿರ್ಮಾಣಕ್ಕೆ ಅನುದಾನ, ಹೊಸ ಬಡಾವಣೆಗಳಲ್ಲಿ ಚರಂಡಿ, ಸೇತುವೆ, ಪ್ರಮುಖ ವೃತ್ತಗಳಲ್ಲಿ ಸಿಮೆಂಟ್ ಬೆಂಚ್ ಅಳವಡಿಕೆ, ಎಸ್.ಸಿ, ಎಸ್.ಟಿ ಜನಾಂಗದವರಿಗೆ ಮೂಲಭೂತ ಸೌಕರ್ಯ ಸೇರಿ 54 ಪ್ರಕಾರಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಮಾಡಲು ₹34 ಕೋಟಿ, ₹54ಲಕ್ಷದ 38ಸಾವಿರದ 203 ವೆಚ್ಚ ಮಾಡಲು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.
2023-24ನೇ ಸಾಲಿನಲ್ಲಿ ಆರಂಭಿಕ ಶಿಲ್ಕು ಹಣ ₹8ಕೋಟಿ 96ಲಕ್ಷದ 98ಸಾವಿರದ 203ರೂಪಾಯಿಗಳು ಉಳಿದಿದ್ದು ನಿರೀಕ್ಷಿತ ಆದಾಯವಾಗಿ 26 ಕೋಟಿ, 18ಲಕ್ಷದ 31ಸಾವಿರ ಹಣ ಸೇರಿಕೊಂಡು ಒಟ್ಟು ಆದಾಯ 35ಕೋಟಿ, 15ಲಕ್ಷದ 29ಸಾವಿರದ 203ರೂಪಾಯಿಗಳು. ಈ ಹಣದಲ್ಲಿ34 ಕೋಟಿ 54ಲಕ್ಷದ 38ಸಾವಿರದ 203ರೂಪಾಯಿ ಖರ್ಚು ಮಾಡಲಿದ್ದು ಉಳಿತಾಯದ ಬಜೆಟ್ ಅಗಿ 60ಲಕ್ಷದ 91ಸಾವಿರ ಉಳಿತಾಯದ ಬಜೆಟ್ ಅನ್ನು ಮಂಡಿಸಿದರು.
ಬಜೆಟ್ ಸಭೆಯಲ್ಲಿ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಅಭಿಯಂತರ ಹಾಲೇಶ್, ಕಂದಾಯ ಅಧಿಕಾರಿ ಮಂಜುನಾಥ್, ಲೆಕ್ಕಾಧಿಕಾರಿ ಪ್ರೇಮಾಲೀಲಾ, ಪ್ರಭು ಸೇರಿ ಕಚೇರಿ ಸಿಬ್ಬಂದಿ ಚುನಾಯಿತ ಸದಸ್ಯರಿದ್ದರು.