ಹಗರಿಬೊಮ್ಮನಹಳ್ಳಿ: ಹಿಂದೂ ಹಬ್ಬಗಳನ್ನು ಗುರಿಯಾಗಿಸಿಕೊಂಡು ರಾಜ್ಯಾದ್ಯಂತ ವ್ಯವಸ್ಥಿತವಾಗಿ ಕಲ್ಲು ತೂರಾಟ ನಡೆಸಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಸರ್ಕಾರ ಗಾಳಿಗೆ ತೂರಿದೆ. ರಾಜ್ಯಾದ್ಯಂತ ಅರಾಜಕತೆ ಸೃಷ್ಟಿಯಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿಯ ಸಂಚಾಲಕ ವೆಂಕಟರಮಣ ಆತಂಕ ವ್ಯಕ್ತಪಡಿಸಿದರು.ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಪ್ರಕರಣಗಳ ಕುರಿತು ಶೀಘ್ರ ಹಾಗೂ ನಿಷ್ಪಕ್ಷಪಾತ ತನಿಖೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿಯ ತಾಲೂಕು ಘಟಕ ಇಲ್ಲಿನ ತಾಲೂಕು ಆಡಳಿತ ಕಚೇರಿಯ ಬಳಿ ಬುಧವಾರ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಈ ಎಲ್ಲ ಪ್ರಕರಣಗಳಲ್ಲಿ ಮುಸ್ಲಿಂ ಯುವಕರು ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ಮಾರಣಾಂತಿಕ ದಾಳಿ ನಡೆಸಿದ್ದರೂ ಸರ್ಕಾರ ಮೌನ ವಹಿಸಿರುವುದು ಹಿಂದೂಗಳ ಪಾಲಿಗೆ ಆಘಾತಕಾರಿಯಾಗಿದೆ. ರಾಜ್ಯದ ಕಾನೂನು- ಸುವ್ಯವಸ್ಥೆಗೆ ಗಂಭೀರವಾದ ಸವಾಲು ಎದುರಾಗಿದ್ದರೂ ಸರ್ಕಾರ ತೆಪ್ಪಗಿರುವುದು ಓಲೈಕೆ ರಾಜಕೀಯದ ಉದಾಹರಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳ ಮೇಲಿನ ಎಲ್ಲ ದೌರ್ಜನ್ಯಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಕಲ್ಲು ತೂರಾಟ ನಡೆಸುವರ ಮೇಲೆ ಕೋಕಾ ಕಾಯಿದೆ ಪರಿಗಣಿಸಬೇಕು. ಜೊತೆಗೆ ಕಲ್ಲು ತೂರಾಟ, ಹತ್ಯೆ, ಚಾಕು ಇರಿತ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಿಂದೂಗಳ ಧಾರ್ಮಿಕ ಆಚರಣೆಗಳ ವೇಳೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ನಂತರ ಬೇಡಿಕೆಗಳ ಕುರಿತು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿ, ಪೊಲೀಸ್ ಮಹಾ ನಿರ್ದೇಶಕರು ಮತ್ತು ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.