ಔದ್ಯೋಗಿಕ ಕ್ಷೇತ್ರದಲ್ಲಿ ಕೌಶಲ್ಯ ವೃದ್ಧಿಗೂ ಆದ್ಯತೆ ನೀಡಿ

KannadaprabhaNewsNetwork |  
Published : Aug 26, 2026, 03:15 AM IST
(ಪೋಟೋ-25ಬಿಕೆಟಿ2, ಬಿ.ವಿ.ವಿ. ಸಂಘದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ 27ನೇ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು.) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಔದ್ಯೋಗಿಕ ಕ್ಷೇತ್ರದಲ್ಲಿ ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳ ಜೊತೆಗೆ ಕೌಶಲ್ಯ ವೃದ್ಧಿಗೂ ಆದ್ಯತೆ ನೀಡಬೇಕು ಎಂದು ಜಿಎಸ್‌ಡಬ್ಲ್ಯೂ ಸೀವರ್‌ ಫೀಲ್ಡ್‌ ಸ್ಟ್ರಕ್ಚರ್ಸ್‌ ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಂಜಿತ್ ಕುಮಾರ್ ಪಿಳ್ಳ್ಯೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಔದ್ಯೋಗಿಕ ಕ್ಷೇತ್ರದಲ್ಲಿ ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳ ಜೊತೆಗೆ ಕೌಶಲ್ಯ ವೃದ್ಧಿಗೂ ಆದ್ಯತೆ ನೀಡಬೇಕು ಎಂದು ಜಿಎಸ್‌ಡಬ್ಲ್ಯೂ ಸೀವರ್‌ ಫೀಲ್ಡ್‌ ಸ್ಟ್ರಕ್ಚರ್ಸ್‌ ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಂಜಿತ್ ಕುಮಾರ್ ಪಿಳ್ಳ್ಯೆ ಹೇಳಿದರು.ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಗ್ಯಾಲರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿ.ವಿ.ವಿ. ಸಂಘದ ಇನ್ಸಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನ 27ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಪಾಲಕರು, ಸ್ನೇಹಿತರು ಹಾಗೂ ಹಿತೈಷಿಗಳ ತ್ಯಾಗ ಮತ್ತು ಆಶೀರ್ವಾದವಿರುತ್ತದೆ. ಆದ್ದರಿಂದ ಪದವೀಧರರು ಅವರೆಲ್ಲರನ್ನೂ ಸದಾ ಸ್ಮರಿಸಿ ಕೃತಜ್ಞರಾಗಿರಬೇಕು. ವೃತ್ತಿಜೀವನದ ಆರಂಭದಲ್ಲಿ ಅಡೆತಡೆಗಳು ಎದುರಾಗುವುದು ಸಹಜ. ಶಿಕ್ಷಕರು ಹಾಗೂ ಪಾಲಕರು ನೀಡಿದ ಭದ್ರ ಬುನಾದಿಯನ್ನು ನೆನಪಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ಬಿ.ವಿ.ವಿ ಸಂಘದ ವ್ಯಾಪ್ತಿಯಲ್ಲಿ ನಾಲ್ಕು ಕಾಲೇಜುಗಳಿದ್ದು, ಇನ್ಸಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಳೆದ 27 ವರ್ಷಗಳಿಂದ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ಇಂದು ನೀವು ಕೇವಲ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿಲ್ಲ. ಈ ಸಂಸ್ಥೆಯಿಂದ ಒಂದು ಜವಾಬ್ದಾರಿಯನ್ನು ಹೊತ್ತು ಹೊರಡುತ್ತಿದ್ದೀರಿ. ಬೀಳೂರು ಗುರುಬಸವ ಅವರ ಆಶೀರ್ವಾದದಿಂದ ಬಸವೇಶ್ವರ ವಿದ್ಯಾವರ್ಧಕ ಸಂಘ ಇಂದು 190ಕ್ಕೂ ಹೆಚ್ಚು ಕಲಿಕಾ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ಬಿಮ್ಸ್ ಕೂಡ ಅದರ ಪ್ರಮುಖ ಸಂಸ್ಥೆಯಾಗಿದ್ದು, ಯುವ ಮ್ಯಾನೇಜರ್‌ಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.55 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬಿ.ವಿ.ವಿ ಸಂಘದ ಇನ್ಸಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನ 27ನೇ ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 55 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಬಿಮ್ಸ್ ನಿರ್ದೇಶಕ ಡಾ.ಪ್ರಕಾಶ ವಡವಡಗಿ ಸ್ವಾಗತಿಸಿದರು. ಡಾ.ಪವನ ಬೆನಕಟ್ಟಿ ಬಿಮ್ಸ್ ನಡೆದು ಬಂದ ಹಾದಿಯನ್ನು ವಿವರಿಸಿದರು. ಡಾ. ಸೀಮಾ ಆರ್. ಪರಿಚಯಿಸಿದರು. ಡಾ.ಅಮರೇಶ ಚರಂತಿಮಠ ಪ್ರತಿಜ್ಞಾ ವಿಧಿ ಬೋಧಿಸಿ, ಸಂತೋಷಕುಮಾರ ವಂದಿಸಿದರು. ಶ್ರೇಯಾ ಜೋರಾಪುರ ತಂಡ ಪ್ರಾರ್ಥನೆ, ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ರಾಜು ಪಲ್ಲೇದ, ಸಂತೋಷ ಜಕಾತಿ ಸೇರಿದಂತೆ ವಿವಿಧ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರು, ಸದಸ್ಯರು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

--------ಕೋಟ್‌ವ್ಯಾಸಂಗದ ಸಂದರ್ಭದಲ್ಲಿ ಕಲಿತ ಕೌಶಲ್ಯಕ್ಕೂ ಕಾರ್ಪೋರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಅಗತ್ಯವಿರುವ ಕೌಶಲ್ಯಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದನ್ನು ಅರಿತು ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿಯಬೇಕು. ತಂಡದಲ್ಲಿ ಕೆಲಸ ಮಾಡುವಾಗ ಪರಸ್ಪರ ಸಹಕಾರ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವೃತ್ತಿಜೀವನದ ಮೊದಲ 5 ರಿಂದ 10 ವರ್ಷಗಳಲ್ಲಿ ಹೆಚ್ಚಿನ ಸಂಬಳಕ್ಕಿಂತ ಕೌಶಲ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಘಟನಾತ್ಮಕ ಶಕ್ತಿ, ಸಹಕಾರ ಮನೋಭಾವ ಹಾಗೂ ಮಾನವೀಯ ಮೌಲ್ಯಗಳು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಮುಖವಾಗಿ ಸಹಕಾರಿಯಾಗುತ್ತವೆ.ರಂಜಿತ್ ಕುಮಾರ್ ಪಿಳ್ಳ್ಯೆ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಗಳ್ಳತನ: ಹುಬ್ಬಳ್ಳಿಯ ಇಬ್ಬರ ಬಂಧನ
ಹಬ್ಬದ ಹೊತ್ತಲ್ಲೇ ಸಕ್ಕರೆ ದರ ಏರಿಕೆ