ಕನ್ನಡಪರ ಸಂಘಟನೆಗಳಿಗೆ ಕರೆ । ಸಂಗ್ಯಾ-ಬಾಳ್ಯ ನಾಟಕ ಪ್ರದರ್ಶನ
ಕನ್ನಡಪ್ರಭ ವಾರ್ತೆ ಸೊರಬ
ಕನ್ನಡಪರ ಸಂಘಟನೆಗಳು ನಾಡು, ನುಡಿಯ ಜತೆಗೆ ಸಂಸ್ಕಾರ, ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳ ಅನಾವರಣಕ್ಕೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ಯುವ ಪೀಳಿಗೆಗೆ ಗ್ರಾಮೀಣ ಕಲೆಗಳ ಪಾಠ ಕಲಿಸಿದಂತಾಗುತ್ತದೆ ಎಂದು ಯಲಸಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಲೋಕೇಶ್ ಹೇಳಿದರು.ತಾಲೂಕಿನ ಯಲಸಿ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಬೆಳದಿಂಗಳ ಸಾಹಿತ್ಯ ಮತ್ತು ಸಂಗ್ಯಾ-ಬಾಳ್ಯ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನಪದ ಸಂಸ್ಕೃತಿ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಮನೋಭಾವ ಕೂಡ ನೈಜವಾಗಿದ್ದು ನಮ್ಮ ಗ್ರಾಮದಲ್ಲಿ ಬೆಳದಿಂಗಳ ಸಾಹಿತ್ಯ ಏರ್ಪಡಿಸಿದ್ದು ಸಂತಸದಾಯಕ ಸಂಗತಿ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಕನ್ನಡತನವನ್ನು ಇನ್ನಷ್ಟು ಗಟ್ಟಿಗೊಳಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದರು.ಸಮಾಜ ಸೇವಕ ರಾಜು ಹಿರಿಯಾವಲಿ ಮಾತನಾಡಿ, ಒಂದು ಕಾಲದಲ್ಲಿ ಬಯಲುನಾಡಿನ ಕಥೆಯಾದ ಸಂಗ್ಯಬಾಳ್ಯ ನಾಟಕ ಮಲೆನಾಡಿನಲ್ಲಿ ಜನಪ್ರಿಯತೆ ಪಡೆದಿತ್ತು. ಇಂತಹ ನಾಟಕ ಪುನಃ ನಮ್ಮ ತಾಲ್ಲೂಕು ಹವ್ಯಾಸಿ ಕಲಾವಿದರಿಂದ ಅನಾವರಣಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.ಪರಶುರಾಮ ಸಣ್ಣಬೈಲ್, ನಾಗರಾಜ ಜೈನ್, ವಿ.ಜಾನಕಪ್ಪ ಮಾತನಾಡಿದರು.
ಶ್ರೀಪಾದ ಬಿಚ್ಚುಗತ್ತಿ, ಕಲಾವಿದ ಎಚ್.ಎಂ.ಪ್ರಶಾಂತ್, ಸುಬ್ರಹ್ಮಣ್ಯ ಗುಡಿಗಾರ್, ತಾಲೂಕು ಕಸಾಪ ಬಳಗದ ಕೆ. ಲಿಂಗರಾಜಗೌಡ, ಮಂಚಿ ರಮೇಶ್, ವಿಶ್ವನಾಥ್ ಹೆಚ್ಚೆ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಮತ್ತಿತರರಿದ್ದರು.