ಕ್ಷೇತ್ರದ ಸಮಸ್ಯೆ ಪರಿಹಾರಿಸಲು ಆದ್ಯತೆ: ಡಿಕೆಶಿ

KannadaprabhaNewsNetwork |  
Published : Jun 20, 2024, 01:12 AM ISTUpdated : Jun 20, 2024, 12:20 PM IST
ಪೊಟೋ೧೯ಸಿಪಿಟಿ೪: ನಗರದ ತಾಪಂ ಸಭಾಂಗಣದ ಹೊರಗೆ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

 ಪಂಚಾಯಿತಿಗೆ ಬಂದಿರುವ ವಿಶೇಷ ಅನುದಾನವನ್ನು ಸಹ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಈ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವಸತಿರಹಿತರ ಸಮಸ್ಯೆ ಪರಿಹರಿಸಲು ಸದ್ಯದಲ್ಲೇ ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಒಬ್ಬರಿಗೂ ಸೈಟ್, ಮನೆ ಹಂಚಿಲ್ಲ, ಸಾಗುವಳಿ ಜಮೀನು ಹಂಚಿಲ್ಲ. ಪಂಚಾಯಿತಿಗೆ ಬಂದಿರುವ ವಿಶೇಷ ಅನುದಾನವನ್ನು ಸಹ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಈ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವಸತಿರಹಿತರ ಸಮಸ್ಯೆ ಪರಿಹರಿಸಲು ಸದ್ಯದಲ್ಲೇ ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲೂಕಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಇವುಗಳನ್ನು ಪರಿಹರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ರಾಮನಗರ ಹಾಗೂ ಕನಕಪುರದಲ್ಲಿ ಭೂ ಸ್ವಾಧೀನ ಪಡಿಸಿಕೊಂಡು ವಸತಿರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಚನ್ನಪಟ್ಟಣದಲ್ಲೂ ೧೦೦ ಎಕರೆ ಭೂ ಸ್ವಾಧೀನಪಡಿಸಿಕೊಂಡು, ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡುವ ಕುರಿತು ಯೋಜನೆ ರೂಪಿಸಲಾಗುವುದು ಎಂದರು.

ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ: ಚನ್ನಪಟ್ಟಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಗರ್ ಹುಕುಂ ಸಾಗುವಳಿ ಕಮಿಟಿ ಸಭೆ ನಡೆಸಿಯೇ ಇಲ್ಲ. ಯಾವೊಬ್ಬ ಅರ್ಹ ಫಲಾನುಭವಿಗೂ ಸಾಗುವಳಿ ಚೀಟಿ ನೀಡಿ, ಜಮೀನು ಹಸ್ತಾಂತರಿಸುವ ಕೆಲಸ ಮಾಡಲಾಗಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಚನ್ನಪಟ್ಟಣ ಕ್ಷೇತ್ರಾದ್ಯಂತ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿ, ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಮುಂದಾಗುತ್ತೇವೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಜನರು ಅನುಭವಿಸುತ್ತಿರುವ ಬವಣೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಲಿಖಿತ ವಿವರಣೆ ಕೇಳಿದ್ದೇನೆ. ಪಂಚ ಗ್ಯಾರಂಟಿ, ನಿವೇಶನ, ಮನೆ, ರೇಷನ್ ಕಾರ್ಡ್ ಆದಿಯಾಗಿ ಪ್ರತಿಯೊಂದು ಸಮಸ್ಯೆಗೂ ಜನರ ಮನೆ ಬಾಗಿಲಿಗೆ ಹೋಗಿ ಪರಿಹಾರ ನೀಡುವ ಉದ್ದೇಶ ನಮ್ಮದು ಎಂದರು.

ಜನರ ಎದುರಿಸುತ್ತಿರುವ ಮೂಲಭೂತ ಸೌಲಭ್ಯಗಳ ಕೊರತೆಯನ್ನೂ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಮಶಾನ, ಕುಡಿಯುವ ನೀರು ಸೇರಿದಂತೆ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದಿಂದ ವಿಶೇಷ ಅನುದಾನ ತಂದು, ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮುಗಿದ ಅಧ್ಯಾಯ: ಚನ್ನಪಟ್ಟಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ಬೊಟ್ಟು ಮಾಡಿದ ಕುರಿತಂತೆ ಇದೆಲ್ಲಾ ಹಿಂದಿನ ಶಾಸಕರ ವೈಫಲ್ಯವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅದೆಲ್ಲಾ ಮುಗಿದ ಅಧ್ಯಾಯ. ಇನ್ನೇನಿದ್ದರೂ ಹೊಸ ಅಧ್ಯಾಯ ಎಂದಷ್ಟೇ ತಿಳಿಸಿದರು.

ಹಿಂದೆ ನಾನು ಕೂಡಾ ಈ ತಾಲೂಕಿನ ೨ ಹೋಬಳಿಗಳನ್ನು ಒಳಗೊಂಡ ಸಾತನೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೆ. ಆಗಿನ ಋಣವನ್ನು ತೀರಿಸುವ ಕಾಲ ಈಗ ಒದಗಿ ಬಂದಿದೆ. ನಮ್ಮ ಸರ್ಕಾರ ಇನ್ನೂ ೪ ವರ್ಷ ಇರುತ್ತದೆ. ಇಲ್ಲಿನ ಜನರ ಸೇವೆಯೇ ನನ್ನ ಗುರಿ ಎಂದು ತಿಳಿಸಿದರು.

ರಾಜ್ಯದ ಮೇಲೇ ದೃಷ್ಟಿ:

ಡಿಕೆ ಬ್ರದರ್ಸ್‌ ವಕ್ರದೃಷ್ಟಿ ಚನ್ನಪಟ್ಟಣದ ಮೇಲೆ ಬಿದ್ದಿರುವ ಬಗ್ಗೆ ಜಾಗರೂಕರಾಗಿರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ವಿದಾಯ ಭಾಷಣದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಪಾಪ ಅವರೇನೋ ಹೇಳಿಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷನಾಗಿ ನನ್ನ ದೃಷ್ಟಿ ಇಡೀ ರಾಜ್ಯದ ಮೇಲಿದೆ ಎಂದು ಹೇಳಿದರು.

ನಾನು ಸದ್ಯ ಯಾರಿಗೂ ಉತ್ತರ ನೀಡಲ್ಲ. ಅವರ ಹೇಳಿಕೆಗೆ ನನ್ನದೇನೂ ತಕರಾರಿಲ್ಲ. ಚನ್ನಪಟ್ಟಣ ಕ್ಷೇತ್ರಕ್ಕೆ ಏನೆಲ್ಲಾ ಮಾಡಬಹುದೋ ಅದನ್ನು ಮಾಡಿ, ಋಣ ತೀರಿಸುವುದೇ ನನ್ನ ಗುರಿ. ಬೆಂಗಳೂರು ಗ್ರಾಮಾಂತರದ ನೂತನ ಸಂಸದರಿಗೆ ಹಿಂದೆ ಡಿ.ಕೆ.ಸುರೇಶ್ ಅವರಿಗೆ ನೀಡಿದ್ದಕ್ಕಿಂತಲೂ ಹೆಚ್ಚು ಸಹಕಾರ ನೀಡಲು ನಾನು ಬದ್ಧ ಎಂದರು.

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನರ ತೀರ್ಪು, ಪಕ್ಷದ ತೀರ್ಪು, ಅದನ್ನು ಯಾರು ತಿರಸ್ಕಾರ ಮಾಡಲು ಆಗಲ್ಲ. ಸದ್ಯಕ್ಕೆ ಋಣ ತೀರಿಸಲು ಬಂದಿದೇನೆ. ಕುರಿತು ನಾನು ಈಗ ಏನು ಮಾತನಾಡಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಎಂಎಲ್‌ಸಿಗಳಾದ ಎಸ್. ರವಿ, ಸುಧಾಮ ದಾಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ