ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಲಾಗಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಕೃಷಿ ಕ್ಷೇತ್ರದ ಸಮಗ್ರ ಅಭ್ಯುದಯ ಎಲ್ಲರ ಆದ್ಯತೆಯಾಗಬೇಕು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ದೇಶದ ಪ್ರಗತಿಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಮಹತ್ವದ್ದಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಪಾಲು ಹೆಚ್ಚಾಗಿದೆ. ರೈತರು ತಮ್ಮ ಪಾರಂಪರಿಕೆ ಪದ್ಧತಿಗಳ ಜೊತೆಗೆ ಇಸ್ರೇಲ್ ಮಾದರಿ ಮುಂತಾದ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ. ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯುವ ವಿಧಾನ, ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಕೃಷಿ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ನೀಡುವುದು ಅಗತ್ಯ ಎಂದು ವಿವರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜೆ.ವೆಂಕಟೇಗೌಡ ಮಾತನಾಡಿ, ಸಿರಿಧಾನ್ಯಗಳು ಗಣನೀಯ ಪ್ರಮಾಣದ ಖನಿಜ, ಲವಣಗಳು, ಜೀವಸತ್ವ ಹೊಂದಿವೆ. ಉತ್ಕೃಷ್ಟ ರೋಗ ನಿರೋಧಕ ಹೊಂದಿವೆ. ಬರಗಾಲದಲ್ಲಿಯೂ ಬೆಳೆಯಬಹುದಾಗಿದೆ. ಈ ಗುಂಪಿಗೆ ರಾಗಿ, ಬಿಳಿ ಜೋಳ, ಸಜ್ಜೆ, ಸಾಮೆ, ಬರಗು ನವಣೆ, ಹಾರಕ ಮತ್ತು ಊದಲು ಸೇರಿವೆ ಎಂದು ಹೇಳಿದರು.ಸಿರಿಧಾನ್ಯಗಳು ಒಣ ಭೂಮಿಯ ಮಹತ್ವದ ಬೆಳೆಯಾಗಿದ್ದು, ಕಡಿಮೆ ಮಳೆ ಪ್ರದೇಶಗಳಲ್ಲಿ ಹೆಚ್ಚಿನ ಇಳುವರಿ ನೀಡಲಿವೆ. ಸುಧಾರಿತ ಬೇಸಾಯ ಕ್ರಮಗಳ ಅವಶ್ಯಕತೆ ಇಲ್ಲದೆ, ಕಡಿಮೆ ರಸಗೊಬ್ಬರ, ಕೀಟನಾಶಕ ಶೂನ್ಯ ಬಳಕೆಯಿಂದ ಬೆಳೆಯಬಹುದಾದ ಬೆಳೆಗಳಾಗಿವೆ. ಬರ ನಿರೋಧಕ ಗುಣಗಳನ್ನು ಹೊಂದಿವೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪಿಎಂಎಸ್‌ಜಿವೈ ಯೋಜನೆಯ ಸಂಪನ್ಮೂಲ ವ್ಯಕ್ತಿ ಅಭಿಷೇಕ್ ಮಾತನಾಡಿ, ಆತ್ಮನಿರ್ಭರ ಭಾರತದಲ್ಲಿ ಕೃಷಿ ಕ್ಷೇತ್ರವೂ ಮಹತ್ವದ ಪಾತ್ರ ವಹಿಸಲಿದ್ದು, ಕೃಷಿಯನ್ನು ಉದ್ದಿಮೆಯಂತೆ ಪರಿಗಣಿಸಿ ಲಾಭದಾಯಕವಾಗಿಸಬಹುದು ಎಂದರು.
ಜಿಲ್ಲಾ ಉಪ ಕೃಷಿ ನಿರ್ದೇಶಕಿ ಗಾಯತ್ರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಡಿ.ರಾಜೇಶ್ವರಿ, ತಾಂತ್ರಿಕ ವಿಭಾಗದ ರೂಪಾ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಗಿರಿಜಾಂಬ,ಪಶು ಇಲಾಖೆಯ ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಇತರರಿದ್ದರು.3ಕೆಡಿಬಿಪಿ4-