ಲೋಕಸಮರ ಎದುರಿಸಲು ಪಕ್ಷ ಸಂಘಟನೆಗೆ ಆದ್ಯತೆ: ನಾರಾಯಣಸಾ ಭಾಂಡಗೆ

KannadaprabhaNewsNetwork | Published : Mar 1, 2024 2:18 AM

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದು ರಾಜ್ಯಸಭೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ನಾರಾಯಣಸಾ ಭಾಂಡಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದು ರಾಜ್ಯಸಭೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ನಾರಾಯಣಸಾ ಭಾಂಡಗೆ ಹೇಳಿದರು.

ರಾಜ್ಯಸಭೆ ಸದಸ್ಯರಾಗಿ ಆಯ್ಕೆಗೊಂಡ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರು, ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾನಾ ಕಾರಣಗಳಿಗಾಗಿ ಪಕ್ಷದಿಂದ ದೂರ ಹೋಗಿರುವವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಕೆಲಸ ಮಾಡಲಾಗುವುದು. ಆ ಮೂಲಕ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಸಂಘಟಿಸಿ ಲೋಕಸಭೆ ಚುನಾವಣೆ ಗೆಲುವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಆದ್ಯತೆ ನೀಡುವ ಪಕ್ಷವಾಗಿದೆ. ಇಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರು ಉನ್ನತ ಹುದ್ದೆ ಪಡೆಯಲು ಸಾಧ್ಯ ಎನ್ನುವುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದ್ದು, ತಮ್ಮ ಆಯ್ಕೆಯ ಮೂಲಕ ಮತ್ತೊಮ್ಮೆ ದೃಢಪಟ್ಟಿದೆ. ತಾವು ಪಕ್ಷದಲ್ಲಿ ಬೆಳೆದು ಬಂದ ರೀತಿ ವಿವರಿಸುತ್ತಾ ಸಂಘ ಪರಿವಾರದ ಹಿರಿಯರಾಗಿದ್ದ ದಿ.ಜ್ಯೋತಿಪ್ರಕಾಶ ಸಾಳುಂಕೆ ಅವರನ್ನು ಸ್ಮರಿಸಿದರು.

ಬಿಜೆಪಿ ಎಂದೆಂದಿಗೂ ಹಿಂದುತ್ವ ಪ್ರತಿಪಾದಕ ಪಕ್ಷವಾಗಿದೆ. ಹಿಂದುತ್ವ ಮತ್ತು ರಾಷ್ಟ್ರದ ರಕ್ಷಣೆಗೆ ಬಿಜೆಪಿ ಸದಾ ಬದ್ಧವಾಗಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರು ಕಟಿಬದ್ಧರಾಗಿದ್ದು, ವಿಶ್ವವೇ ಭಾರತದತ್ತ ನೋಡುವಂತಾಗಿದೆ. ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ದೇಶ ಮೊದಲು ನಂತರ ಪಕ್ಷ ಎನ್ನುವುದು ಆದ್ಯತೆ ಆಗಿದೆ. ದೇಶದ ಹಿತರಕ್ಷಣೆಗೆ ಪ್ರತಿ ಕಾರ್ಯಕರ್ತ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರು.

ಕಾರ್ಯಕರ್ತರ ಸಂಭ್ರಮ:

ರಾಜ್ಯಸಭೆ ಸದಸ್ಯರಾಗಿ ಆಯ್ಕೆಗೊಂಡು ಮೊದಲ ಬಾರಿಗೆ ನಿವಾಸಕ್ಕೆ ನಾರಾಯಣಸಾ ಭಾಂಡಗೆ ಅವರನ್ನು ಕುಟುಂಬದವರು, ಕಾರ್ಯಕರ್ತರು ಆರತಿ ಎತ್ತಿ ಬರಮಾಡಿಕೊಂಡರು. ಈ ವೇಳೆ ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಭಾಂಡಗೆ ಅವರ ಆಗಮನದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಅವರ ನಿವಾಸದ ಮುಂದೆ ಕಾರ್ಯಕರ್ತರು ಜಮಾಯಿಸಿದ್ದರು. ಅವರು ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಹೂ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು.ಪಕ್ಷದ ಮುಖಂಡರ ನಡುವೆ ಬಗೆಹರಿಸಲಾಗದಂತಹ ಸಮಸ್ಯೆಗಳೇನು ಇಲ್ಲ. ಕುಳಿತು ಮಾತನಾಡಿದರೆ ಎಲ್ಲವೂ ಸರಿ ಹೋಗುತ್ತದೆ. ಎಲ್ಲರನ್ನು ಕರೆದು ಮಾತನಾಡಿಸಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಿ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಿ ಲೋಕಸಭೆ ಚುನಾವಣೆ ಎದುರಿಸಲಾಗುವುದು.

- ನಾರಾಯಣಸಾ ಭಾಂಡಗೆ ರಾಜ್ಯಸಭೆ ನೂತನ ಸದಸ್ಯ

Share this article