ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಬಸವಂತಪ್ಪ

KannadaprabhaNewsNetwork |  
Published : Sep 13, 2026, 02:00 AM IST
ಕ್ಯಾಪ್ಷನ12ಕೆಡಿವಿಜಿ35, 36 ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಲೂರು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ಎಸ್‌.ಬಸವಂತಪ್ಪ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಲೂರು ಗ್ರಾಮದಲ್ಲಿ ಸುಮಾರು ₹1.15 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಭೂಮಿಪೂಜೆ ನೆರವೇರಿಸಿದ್ದಾರೆ.

- ಆಲೂರಿನಲ್ಲಿ ₹1.15 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಲೂರು ಗ್ರಾಮದಲ್ಲಿ ಸುಮಾರು ₹1.15 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕವನ್ನು ಸುಧಾರಿಸುವ ಮೂಲಕ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಹಾಗೂ ರೈತರ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆ ಎಂದರು.

‘ಪ್ರಜಾಸೇವೆ’ ಮೂಲಕ ಗ್ರಾಮಮಟ್ಟದಲ್ಲೇ ಅಹವಾಲಿಗೆ ಪರಿಹಾರ:

ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಜನರು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಕಾರ್ಯಕ್ರಮ ರೂಪಿಸಲಾಗಿದೆ. ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲೇ ಪರಿಹಾರ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೇವೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ಯುವ ಸಬಲೀಕರಣಕ್ಕೂ ಸರ್ಕಾರದ ಆದ್ಯತೆ:

ಗ್ರಾಮೀಣ ಯುವಕರ ಸಬಲೀಕರಣದ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವಜನರ ಅಭಿವೃದ್ಧಿಗೆ ₹10 ಲಕ್ಷ ಅನುದಾನ ಒದಗಿಸುವ ಮೂಲಕ ಅವರ ಪ್ರತಿಭೆ ಹಾಗೂ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಯುವ ಸಮುದಾಯವನ್ನು ಸಂಘಟಿಸಿ, ಅವರಲ್ಲಿ ನಾಯಕತ್ವ ಗುಣ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

22 ಕೆರೆಗಳ ಏತನೀರಾವರಿ ಯೋಜನೆ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು. ಈಗಾಗಲೇ ಸರ್ಕಾರ ₹18 ಕೋಟಿ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಮತ್ತು ನಾನು 22 ಕೆರೆಗಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಕೆರೆಗಳನ್ನು ತುಂಬುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಬಾರಿ ಬರಗಾಲ ಸಂಭವಿಸುವ ಮುನ್ಸೂಚನೆ ಕಂಡುಬರುತ್ತದೆ. ರೈತರು ಮಿತವಾಗಿ ನೀರು ಬಳಸಬೇಕು. ಕಡಿಮೆ ತೇವಾಂಶದಲ್ಲಿ ಬೆಳೆಯುವ ಬೆಳೆಗಳ ಬೆಳೆಯುವಂತೆ ಮನವಿ ಮಾಡಿದರು. ಆಲೂರು ಗ್ರಾಮದಲ್ಲಿ ದಿನದ 24 ಗಂಟೆ ಆಸ್ಪತ್ರೆ ಕಾರ್ಯನಿರ್ಹಿಸುವಂತೆ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ, ಗ್ರಾಮದಿಂದ ನಗರಕ್ಕೆ ಕಾಲೇಜುಗಳಿಗೆ ಹೋಗಿ ಹೆಣ್ಣುಮಕ್ಕಳು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ ಎಂಬ ದೂರು ಇದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಪಿಯುಸಿ ಕಾಲೇಜು ಪ್ರಾರಂಭಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

‘ಪ್ರಜಾಸೇವೆ’ ಯೋಜನೆಯಡಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳ ಸ್ಥಿತಿಗತಿ ಹಾಗೂ ಪ್ರಗತಿಯನ್ನು ಟ್ರ್ಯಾಕಿಂಗ್ ಮೂಲಕ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸರ್ಕಾರಿ ಸೇವೆ ಪಡೆಯುವಲ್ಲಿ ಪಾರದರ್ಶಕತೆ ಹೆಚ್ಚಲಿದ್ದು, ಜನರಿಗೆ ತಮ್ಮ ಹಕ್ಕುಗಳನ್ನು ಕೇಳುವ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.

ಮೆಳ್ಳೆಕಟ್ಟೆಯಲ್ಲಿ ಅಡುಗೆ ಕೋಣೆ ಉದ್ಘಾಟನೆ:

ಇದೇ ಸಂದರ್ಭದಲ್ಲಿ ದಾವಣಗೆರೆ ತಾಲೂಕಿನ ಆನಗೋಡು ಹೋಬಳಿಯ ಮೆಳ್ಳೆಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ₹7.45 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅಡುಗೆ ಕೋಣೆಯನ್ನು ಸಚಿವ ಬಸವಂತಪ್ಪ ಉದ್ಘಾಟಿಸಿದರು. ಶಾಲಾ ಮೂಲಸೌಕರ್ಯಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ಅಗತ್ಯ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಣ್ಣ, ಹುಲಿಕಟ್ಟೆ ಶಿವಣ್ಣ, ಅಣಜಿ ನಾಗರಾಜ್, ಆಲೂರು ಹೇಮಣ್ಣ, ಸೋಮಣ್ಣ, ಚನ್ನಬಸಪ್ಪ, ಶಿವಕುಮಾರ್, ಮಹೇಶಣ್ಣ, ಪಿಡಿಒ ಅನಿಲ್, ಕಂದಾಯ ಅಧಿಕಾರಿ ಬಸಪ್ಪ, ರೇವಣ್ಣ, ಸಿದ್ದೇಶ್, ಮಂಜಣ್ಣ ಇನ್ನಿತರರಿದ್ದರು.

- - -

-12ಕೆಡಿವಿಜಿ35, 36.ಜೆಪಿಜಿ:

ಮಾಯಕೊಂಡ ಕ್ಷೇತ್ರದ ಆಲೂರು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ಎಸ್‌.ಬಸವಂತಪ್ಪ ಭೂಮಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಉತ್ತಮ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು: ಪ್ರದೀಪ್
ವಿಕಸಿತ ಭಾರತ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ