ನದಿಪಾತ್ರ ಜನರ ಸುರಕ್ಷತೆಗೆ ಆದ್ಯತೆ: ಶಾಸಕ ಬೇಳೂರು ಗೋಪಾಲಕೃಷ್ಣ

KannadaprabhaNewsNetwork | Published : Aug 2, 2024 12:55 AM

ಸಾರಾಂಶ

ಮಳೆಗಾಲ ಪ್ರಾರಂಭವಾದಾಗಿನಿಂದ ಕಣ್ಮನ ಸೆಳೆಯುತ್ತಿದ್ದ ಜೋಗ ಜಲಪಾತ, ಲಿಂಗನಮಕ್ಕಿಯಲ್ಲಿ ಗೇಟ್ ತೆರೆದಿರುವುದರಿಂದ ರುದ್ರ ರಮಣೀಯವಾಗಿ ಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ಸಾಗರ ವಿಪರೀತ ಮಳೆಯಿಂದಾಗಿ ನಿರೀಕ್ಷೆಗಿಂತ ಮೊದಲೇ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು ಹಂತಹಂತವಾಗಿ ನೀರನ್ನು ಹೊರಕ್ಕೆ ಬಿಡಲು ಚಿಂತನೆ ನಡೆಸಲಾಗಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹೊರಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯದಿಂದ ನದಿಗೆ ನೀರು ಬಿಡುವುದರಿಂದ ನದಿಪಾತ್ರದಲ್ಲಿರುವ ಹರವಳೆ, ಹೆನ್ನಿಬೈಲು, ಯಡ್ಡಳ್ಳಿ, ಮರಳುಕೋರೆ, ಜಾಲಿಗದ್ದೆ, ಗಿಳಾಲಗುಂಡಿ, ಪಡನ್ಬೈಲ್ ಗ್ರಾಮಗಳಲ್ಲಿ ವಾಸಿಸುತ್ತಿರುವ ೪೮ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಕಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಮಳೆ ಪ್ರಮಾಣ ಜಾಸ್ತಿಯಾಗಿ ೫೦ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ ಬಿಟ್ಟರೆ ಗೇರುಸೊಪ್ಪ ಹೊನ್ನಾವರದ ಶರಾವತಿ ನದಿ ತೀರದ ಎಡದಂಡೆ ಮತ್ತು ಬಲದಂಡೆಯ ೪೫೦ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ೧ ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ ಬಿಟ್ಟರೆ ೨೨೦೦ಕ್ಕೂ ಅಧಿಕ ಮನೆಗಳು ಮುಳುಗಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಮತ್ತು ಕಾರವಾರ ಜಿಲ್ಲೆಯ ಶರಾವತಿ ನದಿ ತೀರದ ನಿವಾಸಿಗಳಿಗೆ ತೊಂದರೆಯಾಗದಂತೆ ಹಂತಹಂತವಾಗಿ ನೀರನ್ನು ಹೊರಬಿಡಲಾಗುತ್ತದೆ ಎಂದರು. ಮಳೆಯಿಂದ ಜಲ ಒಡೆಯುತ್ತಿದ್ದು ರಸ್ತೆ ತುಂಬಾ ಹಾನಿಯಾಗಿದೆ. ಈಗಾಗಲೆ ಹಾನಿಯ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ನಷ್ಟದ ಅಂದಾಜನ್ನು ಸರ್ಕಾಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಅಧಿಕೃತ ಮತ್ತು ಅನಧಿಕೃತ ಮನೆಗಳಿಗೆ ತಾರತಮ್ಯ ಇಲ್ಲದೆ ಪರಿಹಾರ ನೀಡಲು ಗಮನ ಹರಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಕಲಸೆ ಚಂದ್ರಪ್ಪ, ಅನಿತಾ ಕುಮಾರಿ, ಸೋಮಶೇಖರ ಲ್ಯಾವಿಗೆರೆ, ಅಶೋಕ ಬೇಳೂರು, ಗಣಪತಿ ಮಂಡಗಳಲೆ, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಹಾಜರಿದ್ದರು.

ಲಿಂಗನಮಕ್ಕಿ ಜಲಾಶಯವೂ ಬಹುತೇಕ ಭರ್ತಿ

ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಮೂರು ರೇಡಿಯನ್ ಗೇಟ್‌ಗಳನ್ನು ತೆರೆದು ಸುಮಾರು ೧೦ ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಯಿತು.ಕಳೆದ ಎರಡು ತಿಂಗಳಿನಿಂದ ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಕಾರಣದಿಂದ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಗರಿಷ್ಠ ೧೮೧೯ ಅಡಿಗಳಷ್ಟಿರುವ ಜಲಾಶಯದಲ್ಲಿ ಈಗ ೧೮೧೦ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಡ್ಯಾಮಿನ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಹೊರಬಿಡಲಾಗಿದೆ. ಕಳೆದ ವಾರ ನೀರಿನ ಮಟ್ಟ ೧೮೦೫ ಅಡಿ ತಲುಪಿದಾಗ ನದಿಗೆ ಬಾಗಿನ ಅರ್ಪಿಸಲಾಗಿತ್ತು. ಆ ಸಂದರ್ಭದಲ್ಲಿ ೬೫ ಸಾವಿರ ಕ್ಯೂಸೆಕ್ಸ್ ಒಳಹರಿವು ಇತ್ತು. ಶನಿವಾರ ಹಾಗೂ ಭಾನುವಾರ ಮಳೆ ಸಂಪೂರ್ಣ ಕಡಿಮೆಯಾಗಿ ಒಳಹರಿವಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಸೋಮವಾರದಿಂದ ಪುನಃ ಮಳೆ ಬಿರುಸುಗೊಂಡು ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣದಲ್ಲಿಯೂ ಜಾಸ್ತಿಯಾಗಿದೆ.

ಜೂನ್ ಮೊದಲ ವಾರದಲ್ಲಿ ಜಲಾಶಯದ ನೀರಿನ ಪ್ರಮಾಣ ತೀರಾ ಕಡಿಮೆಯಿತ್ತು. ಹೊಳೆಬಾಗಿಲು, ಹಸಿರುಮಕ್ಕಿ ಲಾಂಚ್‌ನಲ್ಲಿ ಜನರನ್ನು ಮಾತ್ರ ಸಾಗಿಸಲಾಗುತ್ತಿತ್ತು. ಮುಪ್ಪಾನೆಯಲ್ಲಿ ಲಾಂಚ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಇನ್ನು, ಗುರುವಾರವೂ ಮಳೆ ಮುಂದುವರೆದಿರುವುದರಿಂದ ಜಲಾಶಯಕ್ಕೆ ಮತ್ತಷ್ಟು ನೀರು ಹರಿದುಬಂದರೆ ಒಂದೆರಡು ದಿನಗಳನ್ನು ಇನ್ನೊಂದಿಷ್ಟು ಗೇಟ್‌ಗಳನ್ನು ತೆರೆದು ನದಿಗೆ ನೀರನ್ನು ಬಿಡಲಾಗುತ್ತದೆ.

ಕಳೆಕಟ್ಟಿದ ಜೋಗ :

ಮಳೆಗಾಲ ಪ್ರಾರಂಭವಾದಾಗಿನಿಂದ ಕಣ್ಮನ ಸೆಳೆಯುತ್ತಿದ್ದ ಜೋಗ ಜಲಪಾತ, ಲಿಂಗನಮಕ್ಕಿಯಲ್ಲಿ ಗೇಟ್ ತೆರೆದಿರುವುದರಿಂದ ರುದ್ರ ರಮಣೀಯವಾಗಿ ಕಾಣುತ್ತಿದೆ. ನಾಲ್ಕು ಧಾರೆಗಳಲ್ಲಿ ಹೆಚ್ಚಿನ ನೀರು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ವಾರಾಂತ್ಯದಲ್ಲಿ ಜೋಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

Share this article