ಬ್ಯಾಡಗಿ: ದೇಶ ಕಟ್ಟುವಂಥ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಕೊಡುಗೆಯಾಗಿ ನೀಡುವುದೇ ಬಹುದೊಡ್ಡ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಬಿಇಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ 1993- 94- 95ನೇ ಸಾಲಿನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇವಲ ಹಣದಿಂದಲೇ ಶಿಕ್ಷಣವನ್ನು ಕೊಡುತ್ತೇವೆ ಅಥವಾ ಪಡೆದುಕೊಳ್ಳುತ್ತೇವೆ ಎನ್ನುವುದು ಭ್ರಮೆ. ಹಣ ಗಳಿಸಲೆಂದೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಕಾಲ ದೂರವಾಯಿತು. ಸರ್ಕಾರಿ ಕಾಲೇಜುಗಳಿರಲಿ, ಖಾಸಗಿಯಿರಲಿ ಇನ್ನೇನಿದ್ದರೂ ಗುಣಾತ್ಮಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ನೀಡಲೇಬೇಕಾದ ಅನಿವಾರ್ಯತೆ ಇದೆ. ಅಂದರಷ್ಟೇ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಡಿ. ಬಾಲಾಜಿರಾವ್ ಮಾತನಾಡಿ, ನಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ತಮ್ಮ ಬದುಕಿಗೆ ಬೇಕಾದ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರೆ ಅವರೆಲ್ಲರೂ ಒಂದು ಸಿದ್ಧಾಂತ ರೂಢಿಸಿಕೊಳ್ಳುವ ಮೂಲಕ ದೇಶವು ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಅಂದಾಗ ಮಾತ್ರ ಉನ್ನತ ಶಿಕ್ಷಣದ ಫಲಿತಾಂಶವು ಬರಲಿದೆ ಎಂದರು.ನಿವೃತ್ತ ಪ್ರಾಧ್ಯಾಪಕ ಎಸ್.ವಿ. ಪಟ್ಟಣಶೆಟ್ಟಿ ಮಾತನಾಡಿ, ಶಾಲಾ ಅವಧಿಯಲ್ಲಿ ಕಲಿತ ಜ್ಞಾನ ಮಾತ್ರ ಬದುಕಿನ ಅಂತಿಮ ಹಂತದವರೆಗೂ ಜತೆ ಇರಲಿದೆ. ಗಳಿಸಿದ ಆಸ್ತಿ- ಅಂತಸ್ತು ಯಾವುದೂ ಶಿಕ್ಷಣಕ್ಕೆ ಸಾಟಿಯಾಗುವುದಿಲ್ಲ. ಹೀಗಾಗಿ ಜ್ಞಾನವನ್ನು ಧಾರೆ ಎರೆದ ಶಿಕ್ಷಕರನ್ನು ಸದಾಕಾಲ ಸ್ಮರಿಸಿಕೊಳ್ಳಬೇಕಾಗುತ್ತದೆ. ಆದರೆ ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಲು ಶಿಕ್ಷಣವೆ ಕಾರಣವೆಂಬುದನ್ನು ಮರೆಯಬಾರದು ಎಂದರು.
ಈ ವೇಳೆ ಶಿವಾನಂದ ಬೆನ್ನೂರ, ಬಿ.ಎಸ್. ಚಿನ್ನಕಟ್ಟಿ, ರಾಜು ನವಲೆ, ಸುಧಾ ಹಡಗಲಿ, ಜಗದೀಶ ಶಿಂಧೆ, ಸುಧಾ ಜೋಯಿಸ್, ವೈ.ಬಿ. ಹೊಸಳ್ಳಿ, ಪ್ರಕಾಶ ತಾರೀಕೊಪ್ಪ, ಮಾಲತೇಶ ಬಂಡಿವಡ್ಡರ, ರೇಖಾ ಚತ್ರದ, ರಾಜಶೇಖರ ಮಾತನವರ, ಪ್ರಕಾಶ ಉದ್ಯೋಗಣ್ಣನವರ, ಗಿರೀಶ ಪಟ್ಟಣಶೆಟ್ಟಿ, ಮಾಲತೇಶ ಮೈಲಾರ, ಮಲ್ಲಣ್ಣ ಮತ್ತೂರ, ರಮೇಶ ಕೋಟಿಯವರ ಇತರರಿದ್ದರು.