ಕೊಪ್ಪಳ: ಆರ್ಯವೈಶ್ಯ ಸಮಾಜದಲ್ಲಿ ಅಪಾರ ಸಂಖ್ಯೆಯ ವಕೀಲರಿದ್ದು, ಸಮಾಜದ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಎಲ್. ಕೋರಾ ಹೇಳಿದರು.
ನಾನು ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸಿಎಗಳ ಸಮಾವೇಶ, ಶಿಕ್ಷಕರ ಸಮಾವೇಶ ನಡೆಸಲಾಗಿದ್ದು, ಇದೀಗ ಕೊಪ್ಪಳದಲ್ಲಿ ವಕೀಲರ ಸಮಾವೇಶ ಆಯೋಜಿಸಲಾಗಿದೆ ಎಂದರು.
ಎಲ್ಲ ವೃತ್ತಿಗಳಿಗಿಂತ ವಕೀಲ ವೃತ್ತಿ ಶ್ರೇಷ್ಠವಾದುದು. ಆರ್ಯವೈಶ್ಯ ವಕೀಲರು ಸಮಾಜ ಸಂಘಟನೆಯ ಬಗ್ಗೆ ಕಾಳಜಿ ವಹಿಸಬೇಕು. ಹಿರಿಯ ವಕೀಲರು ಯುವ ವಕೀಲರಿಗೆ ಮಾರ್ಗದರ್ಶನ ನೀಡಬೇಕು. ಕಿರಿಯ ವಕೀಲರು ವೃತ್ತಿಯಲ್ಲಿ ನಿರ್ಲಕ್ಷ್ಯ ತೋರದೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿ. ಹಿರಿಯರ ಸಲಹೆ ಪಡೆದು ಕೇಸ್‌ಗಳಲ್ಲಿ ಜಯ ಸಾಧಿಸಬೇಕು ಎಂದು ಕರೆ ನೀಡಿದರು.ಭಾಗ್ಯನಗರದ ಶಂಕರಾಚಾರ್ಯ ಮಠದ ಶ್ರೀ ಶಿವರಾಮ ಕೃಷ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಘಟನೆಯಲ್ಲಿ ಅಪಾರ ಶಕ್ತಿ ಇರುತ್ತದೆ. ಎಲ್ಲರೂ ಒಗ್ಗೂಡಿದಾಗ ಅವರ ಮಾತಿಗೆ ದೊಡ್ಡ ಬೆಲೆ ಬರುತ್ತದೆ. ಇದು ಪ್ರಥಮ ಸಮಾವೇಶವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡದಾಗಿ ಬೆಳೆಯಲಿ. ಆರ್ಯವೈಶ್ಯ ಸಮಾಜದಲ್ಲಿ ವಕೀಲರು ಬುದ್ಧಿವಂತರು ಹಾಗೂ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವವರು ಎಂದರು.
ಹಿರಿಯ ವಕೀಲ ಆರ್.ಬಿ. ಪಾನಘಂಟಿ ಮಾತನಾಡಿ, ನ್ಯಾಯವಾದಿಗಳಿಗೆ ಸಮಯದ ಮಹತ್ವ ತಿಳಿದಿದೆ. ಈ ರಾಜ್ಯಮಟ್ಟದ ಸಮಾವೇಶಕ್ಕೆ ಎಲ್ಲರಿಂದ ಉತ್ತಮ ಸಹಕಾರ ದೊರೆತಿದೆ. ಇಂಥ ಸಮಾವೇಶಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಬೇಕು. ರಾಜ್ಯದ ಎಲ್ಲ ವಕೀಲರು ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಸಂಘಟನೆ ಇನ್ನಷ್ಟು ಬಲಗೊಳ್ಳಲಿ ಎಂದರು.
ಹಿರಿಯ ವಕೀಲ ಅಶೋಕ ಕೊಂಡಾ ಮಾತನಾಡಿ, ವಕೀಲರು ಯಾವುದೇ ಪ್ರಕರಣಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಿದರೆ ವ್ಯಾಜ್ಯಗಳು ಶೀಘ್ರ ಇತ್ಯರ್ಥವಾಗಲಿವೆ ಎಂದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ಸಮಾವೇಶದಲ್ಲಿ ಹಿರಿಯ ವಕೀಲರಿಗೆ ಕಾನೂನು ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಕಲಬುರಗಿ ವಿಭಾಗದ ಡಾ. ಗುರುಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.