ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರವಾಸೋದ್ಯಮ ಬೆಳೆದಷ್ಟೂ ರಾಜ್ಯ ಹಾಗೂ ಜಿಲ್ಲೆಯ ಆರ್ಥಿಕ ಸಂಪನ್ಮೂಲ ವೃದ್ಧಿಸಲಿದ್ದು ಚಿತ್ರದುರ್ಗದ ಪ್ರಾಗೈತಿಹಾಸಿಕ ಮಹತ್ವ ಜಗತ್ತಿಗೆ ಸಾರುವ ಮತ್ತು ಸಂರಕ್ಷಿಸುವ ಕೆಲಸ ಹೆಚ್ಚಾಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿತ್ರದುರ್ಗ ಎಂದರೆ ಕೇವಲ ಏಳುಸುತ್ತಿನ ಕೋಟೆ ಅಥವಾ ಇತಿಹಾಸ ಮಾತ್ರವಲ್ಲ. ಅದು ಪ್ರಾಗೈತಿಹಾಸಿಕ ಹಿನ್ನೆಲೆ ಹೊಂದಿರುವ ಅಪರೂಪದ ತಾಣ. ಮಾನವನ ಬಾಳಿಕೆ ಆದಿಮಾನವನ ಜೀವನ ಶೈಲಿ ಬೆಂಕಿಯ ಶೋಧನೆ ಗುಂಪು ಜೀವನ ಹಾಗೂ ಬಂಡೆಗಳ ಮೇಲಿನ ರೇಖಾಚಿತ್ರಗಳ ಹಂತದಿಂದಲೇ ದುರ್ಗದ ಇತಿಹಾಸ ಪ್ರಾರಂಭವಾಗಿದೆ ಎಂದು ಬಣ್ಣಿಸಿದರು.
ಚಂದ್ರವಳ್ಳಿಯ ಗುಹೆಗಳು ಹಾಗೂ ಹುಲಿಗುಂದಿಯ ಬಂಡೆಗಳ ಮೇಲೆ ಆದಿಮಾನವರು ಬಿಡಿಸಿರುವ ರೇಖಾಚಿತ್ರಗಳು ಇಲ್ಲಿನ ಪ್ರಾಚೀನತೆಗೆ ಸಾಕ್ಷಿಯಾಗಿವೆ. ಇಂತಹ ಅಪರೂಪದ ಪಾರಂಪರಿಕ ಕುರುಹುಗಳನ್ನು ಸಂರಕ್ಷಿಸಿ, ಇತಿಹಾಸವನ್ನು ಪುನರ್ ನಿರ್ಮಿಸುವ ಮತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಬದ್ಧತೆ ನಮ್ಮದಾಗಬೇಕು ಎಂದರು.
*ದೇಶಕ್ಕೆ ಆದಾಯ ಹೆಚ್ಚಳ:
ದೇಶಕ್ಕೆ ಹೆಚ್ಚಿನ ಆದಾಯ ಬರಬೇಕಾದರೆ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವುದು ಅತ್ಯಂತ ಮುಖ್ಯವಾಗಿದ್ದು, ಪ್ರವಾಸೋದ್ಯಮವು ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಉದ್ಯಮವಾಗಿದೆ ಯಾವ ದೇಶ, ರಾಜ್ಯ ತನ್ನಲ್ಲಿರುವ ನೈಸರ್ಗಿಕ ಹಾಗೂ ಐತಿಹಾಸಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆಯೋ ಅಲ್ಲಿನ ಆರ್ಥಿಕತೆ ಅತ್ಯಂತ ಬಲಗೊಳ್ಳುತ್ತದೆ. ನೆರೆಯ ಕೇರಳ ರಾಜ್ಯವು ಪ್ರವಾಸೋದ್ಯಮದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದು ಕರ್ನಾಟಕದಲ್ಲೂ ಪ್ರವಾಸೋದ್ಯಮ ನೀತಿ-ನಿಯಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ ಮಾತನಾಡಿ, ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಪ್ರವಾಸೋದ್ಯಮ ಮರುಸೃಷ್ಟಿ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಡ್ಲೆಗುದ್ದು ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ರಂಜಿತ್, ಇಂಚರ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅಭಿಜ್ಞಾ ಮತ್ತು ತೃಪ್ತಿ ಅವರಿಗೆ ನಗದು ಬಹುಮಾನ ವಿತರಿಸಲಾಯಿತು.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಪ್ರವಾಸಿಗರಿಗೆ ನೆರವಾದ ಪ್ರವಾಸಿ ಮಿತ್ರರಾದ ಎಂ.ಮಲ್ಲಿಕಾರ್ಜುನ, ಕೆ.ಮಲ್ಲಿಕಾರ್ಜುನ, ಸಂತೋಷ್, ಅಭಿಲಾಷ್ ಹಾಗೂ ಬಿ.ಶ್ರೀನಿವಾಸ್ ಅವರನ್ನು ಪ್ರಶಂಸಿಸಿ ಅಭಿನಂದಿಸಲಾಯಿತು. ಇದೇ ವೇಳೆ ಚಿತ್ರದುರ್ಗ ಕೋಟೆಗೆ ಭೇಟಿ ನೀಡಿದ್ದ ಪ್ರವಾಸಿಗರಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರವಾಸಿ ಮಿತ್ರರು, ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು. ಸಿಬ್ಬಂದಿ ಮನು ಸ್ವಾಗತಿಸಿದರು. ವಿ. ವಿಕಾಸ್ ಕುಮಾರ್ ನಿರೂಪಿಸಿದರು. ವಿಜಯಲಕ್ಷ್ಮಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.