ವಿದ್ಯುತ್‌ ಕಡಿತ, ಸೋರಿಕೆ ತಪ್ಪಿಸಲು ಆದ್ಯತೆ: ಹರೀಶ್‌ ಕುಮಾರ್‌

KannadaprabhaNewsNetwork |  
Published : Oct 05, 2025, 01:01 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಹರೀಶ್‌ ಕುಮಾರ್‌. | Kannada Prabha

ಸಾರಾಂಶ

ಮೆಸ್ಕಾಂಗೆ ಸರ್ಕಾರದ ಯಾವುದೇ ಅನುದಾನ ಇಲ್ಲ. ಖರ್ಚು ಮತ್ತು ಅಭಿವೃದ್ಧಿ ಎಲ್ಲವೂ ಮೆಸ್ಕಾಂನ ಆದಾಯದಲ್ಲೇ ನಡೆಯೋದು. ಇದರೊಂದಿಗೆ ವಿದ್ಯುತ್‌ ಕಡಿತ ಆಗದಂತೆ ಹೆಚ್ಚು ಗಮನ ಹರಿಸಬೇಕಿದೆ. ಅದಕ್ಕಾಗಿ ನಿರ್ವಹಣೆಯ ಕೆಲಸ ತ್ವರಿತಗೊಳಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹರೀಶ್‌ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಿದ್ಯುತ್‌ ಸೋರಿಕೆ ತಡೆಗಟ್ಟಿ ಮೆಸ್ಕಾಂನ ಆದಾಯ ಹೆಚ್ಚಿಸುವುದು, ಮೆಸ್ಕಾಂನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡುವುದು, ವಿದ್ಯುತ್‌ ಕಡಿತವನ್ನು ತಪ್ಪಿಸಲು ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳಲು ಆದ್ಯತೆ ನೀಡುವುದಾಗಿ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತ (ಮೆಸ್ಕಾಂ) ನೂತನ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಸ್ಕಾಂಗೆ ಸರ್ಕಾರದ ಯಾವುದೇ ಅನುದಾನ ಇಲ್ಲ. ಖರ್ಚು ಮತ್ತು ಅಭಿವೃದ್ಧಿ ಎಲ್ಲವೂ ಮೆಸ್ಕಾಂನ ಆದಾಯದಲ್ಲೇ ನಡೆಯೋದು. ಇದರೊಂದಿಗೆ ವಿದ್ಯುತ್‌ ಕಡಿತ ಆಗದಂತೆ ಹೆಚ್ಚು ಗಮನ ಹರಿಸಬೇಕಿದೆ. ಅದಕ್ಕಾಗಿ ನಿರ್ವಹಣೆಯ ಕೆಲಸ ತ್ವರಿತಗೊಳಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.

ಸ್ಥಳೀಯರಿಗೆ ಉದ್ಯೋಗ ಆದ್ಯತೆ:

ಮೆಸ್ಕಾಂನ 4 ಜಿಲ್ಲಾ ವ್ಯಾಪ್ತಿಯಲ್ಲಿ 9,248 ಹುದ್ದೆಗಳ ಪೈಕಿ 4,028 ಹುದ್ದೆಗಳು ಖಾಲಿ ಇವೆ. ಅದರಲ್ಲೂ 2,683ರಷ್ಟು ಪವರ್‌ ಮ್ಯಾನ್‌ಗಳ ಕೆಲಸ ಖಾಲಿ ಇವೆ. ಇದರಿಂದ ವಿಶೇಷವಾಗಿ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ಮೆಸ್ಕಾಂನಲ್ಲಿ ಪವರ್‌ ಮ್ಯಾನ್‌ ಹುದ್ದೆಗೆ ಕರಾವಳಿಯ ಹೆಚ್ಚಿನ ಯುವಕರು ಅರ್ಜಿ ಸಲ್ಲಿಸುವುದಿಲ್ಲ. ಇಲ್ಲಿ ಆಯ್ಕೆಯಾಗಿ ಬರುವ ಉತ್ತರ ಕರ್ನಾಟಕದವರು 3 ವರ್ಷ ಬಳಿಕ ತಮ್ಮೂರಿಗೆ ವರ್ಗಾವಣೆ ಪಡೆದು ಹೋಗುತ್ತಾರೆ. ಕರಾವಳಿ ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ನೇಮಕಾತಿ ನಡೆಸುವ ಬದಲು ಮೆಸ್ಕಾಂ ವ್ಯಾಪ್ತಿಯವರು ಅಥವಾ ಆಯಾ ಜಿಲ್ಲಾ ಮಟ್ಟದ ಯುವಕರು ಮಾತ್ರ ಅರ್ಜಿ ಹಾಕುವಂತೆ ಕಾನೂನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹರೀಶ್‌ ಕುಮಾರ್‌ ಹೇಳಿದರು.

ಪ್ರಸ್ತುತ 18ರಷ್ಟು 33/11 ಕೆವಿ ಸಬ್‌ಸ್ಟೇಷನ್‌ಗಳ ಕೆಲಸ ಪ್ರಗತಿಯಲ್ಲಿದೆ. ವಿದ್ಯುತ್ ಸರಬರಾಜನ್ನು ಸುಧಾರಿಸಲು ಇನ್ನೂ 9 ಸಬ್‌ಸ್ಟೇಷನ್‌ಗಳಿಗೆ ಅನುಮೋದನೆ ನೀಡಲಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 17.01 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದರು.

ಪಂಚಾಯ್ತಿಗಳ ಬಿಲ್‌ 600 ಕೋಟಿ ರು. ಬಾಕಿ: ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಬೀದಿ ದೀಪಗಳ ಬಿಲ್‌ ಸುಮಾರು 500- 600 ಕೋಟಿ ರು. ಇನ್ನೂ ಮೆಸ್ಕಾಂಗೆ ಬರಲು ಬಾಕಿ ಉಳಿದಿದೆ. ಪಂಚಾಯ್ತಿ ಮಟ್ಟದಲ್ಲಿ ವಿದ್ಯುತ್‌ ಪೋಲಾಗುವುದನ್ನು ತಪ್ಪಿಸಲು ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಹರೀಶ್‌ ಕುಮಾರ್‌ ತಿಳಿಸಿದರು.

ರಾಜ್ಯ ಸೀಡ್‌ ಆ್ಯಂಡ್‌ ಆರ್ಗಾನಿಕ್‌ ಸರ್ಟಿಫಿಕೇಶನ್‌ ಏಜೆನ್ಸಿ ಅಧ್ಯಕ್ಷೆ ಲಾವಣ್ಯ ಬಲ್ಲಾಳ್‌, ಕಾಂಗ್ರೆಸ್‌ ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ನೀರಜ್‌ ಪಾಲ್‌, ಸುಹಾನ್‌ ಆಳ್ವ, ಚಿತ್ತರಂಜನ್‌ ಶೆಟ್ಟಿ, ಟಿ.ಕೆ.ಸುಧೀರ್‌, ವಿಕಾಸ್‌ ಶೆಟ್ಟಿ, ಶುಭೋದಯ ಆಳ್ವ, ಜಿತೇಂದ್ರ ಸುವರ್ಣ ಮತ್ತಿತರರು ಇದ್ದರು.

-------------

ಕಾಂಗ್ರೆಸ್‌ಗೆ ಒಂದು ಬಿಜೆಪಿಗೆ ಇನ್ನೊಂದು ನೀತಿ ಇದೆಯೇ?

ಕರ್ನಾಟಕದಲ್ಲಿ ನಕ್ಸಲರ ಶರಣಾಗತಿ ಮಾಡಬಾರದು ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬಿಜೆಪಿ ಸರ್ಕಾರ ಇರುವ ಛತ್ತೀಸ್‌ಗಡದಲ್ಲಿ ಇತ್ತೀಚೆಗೆ 170ಕ್ಕೂ ಅಧಿಕ ನಕ್ಸಲರ ಶರಣಾಗತಿ ಆಗಿದೆ. ಬಿಜೆಪಿ ಸರ್ಕಾರಕ್ಕೆ ಒಂದು ಕಾನೂನು, ಕಾಂಗ್ರೆಸ್‌ಗೆ ಒಂದು ಕಾನೂನು ಇದೆಯೇ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಹರೀಶ್‌ ಕುಮಾರ್‌ ಪ್ರಶ್ನಿಸಿದರು. ನಮ್ಮ ದೇಶದಲ್ಲೂ ದಂಗೆಯ ಪರಿಸ್ಥಿತಿ ಬರಬಹುದು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಕೆ ನೀಡುತ್ತಾರೆ ಎಂದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಅವರಿಗೇ ಅನುಮಾನಗಳಿವೆ ಎಂದು ಟೀಕಿಸಿದರು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’