ಮುತ್ತಿನೊಪ್ಪ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಡಲು ಆದ್ಯತೆ : ಟಿ.ಡಿ.ರಾಜೇಗೌಡ

KannadaprabhaNewsNetwork | Published : Feb 18, 2025 12:32 AM

ಸಾರಾಂಶ

ನರಸಿಂಹರಾಜಪುರ, ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದು ಈ ಶಾಲೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡುವುದಕ್ಕೆ ಮೊದಲ ಪ್ರಾಧಾನ್ಯತೆ ನೀಡುತ್ತೇನೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

- ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹15 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದು ಈ ಶಾಲೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡುವುದಕ್ಕೆ ಮೊದಲ ಪ್ರಾಧಾನ್ಯತೆ ನೀಡುತ್ತೇನೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಸೋಮವಾರ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಾಲಕ, ಬಾಲಕಿಯರ ಹೈಟೆಕ್ ಶೌಚಾಲಯ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಆದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತದೆ. ಆದರೆ, ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವಂತೆ ಪೋಷಕರು, ಶಿಕ್ಷಕರು ಶ್ರಮಿಸಬೇಕು ಎಂದರು.

ಶಿಕ್ಷಣಕ್ಕೆ ನಾನು ಹೆಚ್ಚು ಆದ್ಯತೆ ನೀಡಿದ್ದು ಸರ್ಕಾರಿ ಶಾಲೆ ಉಳಿಸುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ. ಕೆಲವು ವರ್ಷಗಳ ಹಿಂದೆ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಪ್ರಯತ್ನ ನಡೆದಿತ್ತು. ನಾನು ಈ ಬಗ್ಗೆ ಪ್ರಯತ್ನ ಪಟ್ಟು ಮುತ್ತಿನಕೊಪ್ಪಕ್ಕೆ ಕಾಲೇಜು ಉಳಿಸಿದ್ದೇನೆ. ದೇಶ ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಕಲಿಯಬೇಕು. ನಾನು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ರಾಜ್ಯದ 228 ಶಾಸಕರಲ್ಲಿ ಶಿಕ್ಷಣಕ್ಕೆ ಹೆಚ್ಚು ಅನುದಾನ ತಂದ 6 ರಿಂದ 8 ಶಾಸಕರಲ್ಲಿ ನಾನು ಸೇರಿದ್ದೇನೆ ಎಂದರು.

ಇಂದು ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿದೆ. ಪ್ರತಿಯೊಂದು ಕಂಪ್ಯೂಟರೀಕರಣ ಆಗುತ್ತಿದೆ. ಆನ್ ಲೈನ್ ನಲ್ಲೇ ಅರ್ಜಿ ಹಾಕಬೇಕಾಗಿದೆ. ವಿಮಾನ, ರೈಲು,ಬಸ್ಸು ಟಿಕೇಟ್ ಬುಕ್ ಸಹ ಆನ್ ಲೈನ್ ನಲ್ಲಿ ಮಾಡಬಹುದು. ವೇಗವಾಗಿ ಬೆಳೆಯುತ್ತಿರುವ ಇಂದಿನ ತಂತ್ರಜ್ಞಾನವನ್ನು ಎಲ್ಲಾ ಮಕ್ಕಳು ಕಲಿಯಬೇಕು. ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕು. ಬುದ್ದಿವಂತರಾಗಬೇಕು ಎಂದು ಕರೆ ನೀಡಿದರು.

ನಾನು ರಾಜ್ಯ ನವೀಕರಿಸಬಹುದಾದ ಇಂದು ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದು ಈಗ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಈ ನಿಗಮದಿಂದ ₹65 ಕೋಟಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ನಿಗಮದ ಸಿ.ಆರ್.ಎಸ್ ನಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ₹5 ಕೋಟಿ ನೀಡಿದ್ದೇವೆ. ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡಕ್ಕೆ ಈ ಹಿಂದೆಯೇ ಅನುದಾನ ನೀಡಿದ್ದೇನೆ. ಇನ್ನೂ ಕಟ್ಟಡದ ಕೆಲಸ ಬಾಕಿ ಇರುವುದರಿಂದ ಮುಂದಿನ ದಿನಗಳಲ್ಲಿ ₹10 ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.

ಗ್ಯಾರಂಟಿಗೆ 250 ಕೋಟಿ

ಶೃಂಗೇರಿ ಕ್ಷೇತ್ರದ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲೂಕು ಹಾಗೂ ಖಾಂಡ್ಯ ಹೋಬಳಿಗೆ 5 ಗ್ಯಾರಂಟಿಗಳಿಗಾಗಿ ವರ್ಷಕ್ಕೆ ₹250 ಕೋಟಿ ನೀಡುತ್ತಿದ್ದೇವೆ. ಈ ಹಿಂದಿನ ಬಿಜೆಪಿ ಸರ್ಕಾರ ಬಡವರಿಗೆ ಇಷ್ಟು ದೊಡ್ಡ ಮೊತ್ತದ ಹಣ ಖರ್ಚು ಮಾಡಿರಲಿಲ್ಲ. ಕೊರೋನ ಬಂದ 2 ವರ್ಷದಲ್ಲಿ ಬಿಜೆಪಿ ಏನೂ ಮಾಡಲಿಲ್ಲ. ಜನರಿಗೆ ಕಷ್ಟಗಳಿಗೆ ಸ್ಪಂದಿಸಲಿಲ್ಲ. ನಾನು ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗಾಗಿ ಹತ್ತಾರು ಯೋಜನೆ ರೂಪಿಸುತ್ತಿದ್ದೇನೆ. ಈಗಾಗಲೇ ಶೃಂಗೇರಿ ಕ್ಷೇತ್ರದ ರಸ್ತೆಗಳ ಹೊಂಡ ಮುಚ್ಚಿದ್ದೇವೆ. ಅಗತ್ಯವಿರುವ ರಸ್ತೆಗೆ ಮರು ಡಾಂಬರೀಕರಣ ಮಾಡಿದ್ದೇವೆ ಎಂದರು.

ಅರಣ್ಯ ಒತ್ತುವರಿ ಸಮಸ್ಯೆ ಇದ್ದು ಇದರ ಪರಿಹಾರಕ್ಕಾಗಿ ಟಾಸ್ಕ್ ಫೋರ್ಸ ರಚನೆಯಾಗಿದೆ. ಎಲ್ಲವನ್ನು ಕಾನೂನು ಬದ್ಧವಾಗಿ ಮಾಡುತ್ತೇವೆ. ಶೃಂಗೇರಿ ಕ್ಷೇತ್ರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಘೋಷಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮನೋಹರ್ ಮಾತನಾಡಿ, ಮುತ್ತಿನಕೊಪ್ಪ ಶಾಲೆ ಹಳೆಯ ಕಟ್ಟಡ ತೆಗೆಯಲಾಗಿದ್ದು ಶಾಸಕರು ನಬಾರ್ಡನಿಂದ ₹66 ಲಕ್ಷ ಮಂಜೂರು ಮಾಡಿಸಿದ್ದು ಆ ಹಣದಲ್ಲಿ 3 ಕೊಠಡಿ ನಿರ್ಮಾಣವಾಗಿದೆ. ಮತ್ತೆ ₹5 ಲಕ್ಷ ಮಂಜೂರು ಮಾಡಿಸಿದ್ದಾರೆ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಮ್ಮ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಅವರನ್ನು ಸನ್ಮಾನಿಸಲಾಯಿತು. ನಂತರ ಶಾಸಕರು ಮುತ್ತಿನಕೊಪ್ಪ ಆಟೋ ನಿಲ್ದಾಣವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಪಯಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ, ಶಾಲೆಯ ಸಹ ಶಿಕ್ಷಕ ನಾಗೇಶ್ ಇದ್ದರು.

Share this article