52 ಗ್ರಾಮಗಳಿಗೆ ಕುಡಿಯಲು ಖಾಸಗಿ ಬೋರ್‌ವೆಲ್‌ ನೀರು

KannadaprabhaNewsNetwork | Published : May 18, 2024 12:31 AM

ಸಾರಾಂಶ

ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿದ್ದರೂ 52 ಗ್ರಾಮಗಳಲ್ಲಿ 81 ಖಾಸಗಿ ಒಡೆತನದ ಕೊಳವೆ ಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಧಾರವಾಡ:

ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ತಹಸೀಲ್ದಾರ್‌ರು ನಿಗಾ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಬರ ಪರಿಸ್ಥಿತಿ, ಕುಡಿಯುವ ನೀರು, ಮೇವು ಹಾಗೂ ಬರಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿದ್ದರೂ 52 ಗ್ರಾಮಗಳಲ್ಲಿ 81 ಖಾಸಗಿ ಒಡೆತನದ ಕೊಳವೆ ಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕಲಘಟಗಿಯ 26 ಗ್ರಾಮಗಳಿಗೆ 46, ಧಾರವಾಡದಲ್ಲಿ 18 ಗ್ರಾಮಗಳಿಗೆ 26 ಹಾಗೂ ಹುಬ್ಬಳ್ಳಿಯ ಐದು ಗ್ರಾಮಗಳಿಗೆ 5 ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಎಲ್ಲಿಯಾದರೂ ಜಾನುವಾರು ಅಥವಾ ಮಳೆಹಾನಿಯಾದಲ್ಲಿ ತಹಸೀಲ್ದಾರ್‌ ಖುದ್ದಾಗಿ ಭೇಟಿ ನೀಡಬೇಕು. ಪರಿಸ್ಥಿತಿ ಪರಿಶೀಲಿಸಿ ತಕ್ಷಣವೇ ಪರಿಹಾರ ನೀಡುವಂತೆ ಸೂಚಿಸಿದರು. ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೊಳ್ಳಿ ಗ್ರಾಮದ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು ತಹಸೀಲ್ದಾರ್‌ ತಕ್ಷಣ ಪರಿಶೀಲಿಸುವಂತೆ ತಿಳಿಸಿದರು. ಅಲ್ಲದೇ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನೀರಿನ ಟ್ಯಾಂಕ್‌ನಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದ ಕುರಿತು ಅಹವಾಲು ಬಂದಿದ್ದು ಧಾರವಾಡ ತಹಸೀಲ್ದಾರ್‌ ತಕ್ಷಣವೇ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಮೇವಿನ ಸಮಸ್ಯೆಯಿಲ್ಲ. ಈಗಾಗಲೇ 62,463 ಮೆಟ್ರಿಕ್ ಟನ್ ಮೇವು ಸಂಗ್ರಹವಿದ್ದು ರೈತರಿಗಾಗಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದರು. ಮಲಪ್ರಭಾ ಬಲದಂಡೆ ಕಾಲುವೆಯಿಂದ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳದ 58 ಕೆರೆಗಳಿಗೆ ನೀರು ಸರಬರಾಜು ಆಗುತ್ತಿದ್ದು, ಬಹುತೇಕ ಕಡೆ ಕೆರೆಗಳು ಭರ್ತಿಯಾಗುತ್ತಿವೆ. ತಹಸೀಲ್ದಾರ್‌ರು ಭೇಟಿ ನೀಡಿ ಪರಿಶೀಲಿಸಬೇಕು. ನೀರು ಎಲ್ಲಿಯೂ ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ, ನಿಗಾ ವಹಿಸಬೇಕೆಂದರು. ಮೇ 23ಕ್ಕೆ ನೀರು ಸರಬರಾಜು ಸ್ಥಗಿತಗೊಂಡು ಮುಂದೆ ಗದಗ ಜಿಲ್ಲೆಗೆ ಪೂರೈಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕೆಂದು ನಗರ ನೀರು ಸರಬರಾಜು ಮಂಡಳಿ ಮುಖ್ಯ ಎಂಜಿನಿಯರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಕೃಷಿ ಜಂಟಿ ನಿರ್ದೇಶಕ ಕಿರಣಕುಮಾರ ಎಂ. ಇದ್ದರು.

Share this article