ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ; 25ಕ್ಕೂ ಹೆಚ್ಚು ಮಂದಿಗೆ ಗಾಯ

KannadaprabhaNewsNetwork |  
Published : Dec 08, 2025, 01:45 AM IST
7ಕೆಎಂಎನ್ ಡಿ26,27,28,29 | Kannada Prabha

ಸಾರಾಂಶ

ಕೆ.ಪಿ.ಅಗ್ರಹಾರದ ರಾಘವೇಂದ್ರ ಹೋಟೆಲ್ ಕೆಲಸಗಾರರು, ಕುಟುಂಬ ವರ್ಗದವರು ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಮಂದಿ ಅಮ್ಮ‌ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ನ ಖಾಸಗಿ ಬಸ್ಸಿನಲ್ಲಿ ಮಳವಳ್ಳಿ ತಾಲೂಕಿನ ಶಿಂಷ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಸ್ಥಳದಲ್ಲೇ ಮಾಂಸಾಹಾರ ಅಡುಗೆ ಮಾಡಿ ಊಟ ಮಾಡಿದ ನಂತರ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಖಾಸಗಿ ಬಸ್ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಮಹಿಳೆಯರು ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಅಗರಲಿಂಗನದೊಡ್ಡಿ - ತೈಲೂರು ಕೆರೆ ಸಮೀಪ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಭಾನುವಾರ ಸಂಜೆ ಜರುಗಿದೆ.

ಬೆಂಗಳೂರು- ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರದ ಸುಮಾರು 25 ಮಂದಿ ಗಾಯಗೊಂಡಿದ್ದು, ತೀವ್ರವಾಗಿ ಗಾಯಗೊಂಡಿರುವ ಸನತ್, ಶಿಲ್ಪ, ದೀಕ್ಷಿತ ಸೇರಿದಂತೆ ಹಲವರಿಗೆ ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೆ.ಪಿ.ಅಗ್ರಹಾರದ ರಾಘವೇಂದ್ರ ಹೋಟೆಲ್ ಕೆಲಸಗಾರರು, ಕುಟುಂಬ ವರ್ಗದವರು ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಮಂದಿ ಅಮ್ಮ‌ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ನ ಖಾಸಗಿ ಬಸ್ಸಿನಲ್ಲಿ ಮಳವಳ್ಳಿ ತಾಲೂಕಿನ ಶಿಂಷ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಸ್ಥಳದಲ್ಲೇ ಮಾಂಸಾಹಾರ ಅಡುಗೆ ಮಾಡಿ ಊಟ ಮಾಡಿದ ನಂತರ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು.

ತೈಲೂರು ಕೆರೆ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ರಸ್ತೆ ಬದಿ ಸಿಮೆಂಟ್ ಬ್ಲಾಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂಬದಿ ಚಕ್ರದ ಆ್ಯಕ್ಸೆಲ್ ತುಂಡಾಗಿ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್, ಪಿಎಸ್ ಐ ಮಂಜುನಾಥ್, ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ ಹಾಗೂ ಸಿಬ್ಬಂದಿ ಹೆದ್ದಾರಿ ವಾಹನಗಳ ಸವಾರರ ಸಹಾಯದಿಂದ ಅಪಘಾತದ ಬಸ್ ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ರವಾನಿಸಿದರು.

ನಂತರ ಮದ್ದೂರು ಆಸ್ಪತ್ರೆ ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ನಂತರ ತೀವ್ರವಾಗಿ ಗಾಯಗೊಂಡವರನ್ನು ಆ್ಯಂಬುಲೆನ್ಸ್ ಗಳ ಸಹಾಯದಿಂದ ಮಂಡ್ಯ ಆಸ್ಪತ್ರೆಗೆ ರವಾನಿಸಿದರು.

ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದಿಂದಾಗಿ ತೈಲೂರು ಕೆರೆ ಸಮೀಪದ ಸರ್ವೀಸ್ ರಸ್ತೆಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸಂಚಾರಿ ಪೊಲೀಸರು ಕ್ರೇನ್ ಸಹಾಯದಿಂದ ಉರುಳಿ ಬಿದ್ದ ಬಸ್ಸನ್ನು ರಸ್ತೆಯಿಂದ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗಾಯಾಳುಗಳ ಆರೋಗ್ಯ ವಿಚಾರಿಸಿದ ಡೀಸಿ:

ಮಂಡ್ಯ: ಮದ್ದೂರು ತಾಲೂಕು ತೈಲೂರು ಬಳಿ ಖಾಸಗಿ ಬಸ್ ಅಪಘಾತದಲ್ಲಿ ಗಾಯಗೊಂಡು ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರ ಆರೋಗ್ಯವನ್ನು ಜಿಲ್ಲಾಧಿಕಾರಿ ಡಾ.ಕುಮಾರ ವಿಚಾರಿಸಿದರು.

ನಂತರ ಜಿಲ್ಲಾಧಿಕಾರಿಗಳು ಸೂಕ್ತ ಹಾಗೂ ಉತ್ತಮ ಮಟ್ಟದ ಔಷಧೋಪಚಾರಗಳನ್ನು ತುರ್ತಾಗಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಿ ಎಚ್ಡಿಕೆ ಸೂಚನೆ:

ಮದ್ದೂರು ತಾಲೂಕಿನ ಬೆಂಗಳೂರು- ಮೈಸೂರು ಹೆದ್ದಾರಿಯ ತೈಲೂರು- ಅಗರಲಿಂಗನದೊಡ್ಡಿ ಗ್ರಾಮದ ಬಳಿ ಸಂಭವಿಸಿದ ಖಾಸಗಿ ಬಸ್ ಅಪಘಾತದಲ್ಲಿ 25 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದೇನೆ. ಗಾಯಾಳುಗಳೆಲ್ಲರೂ ಶೀಘ್ರವೇ ಚೇತರಿಸಿಕೊಳ್ಳಲಿ. ಯಾರ ಪ್ರಾಣಕ್ಕೂ ಹಾನಿ ಆಗದೇ ಎಲ್ಲರೂ ಗುಣಮುಖರಾಗಿ ಮನೆಗಳಿಗೆ ಮರಳಲಿ ಎಂದು ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌