ಹೂವಿನಹಡಗಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಖಾಸಗಿ ಕ್ಯಾಂಟಿನ್ ಆರಂಭ!

KannadaprabhaNewsNetwork | Published : Mar 12, 2025 12:48 AM

ಸಾರಾಂಶ

ಇಲ್ಲಿನ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಓದಲು ಬರುವ 1200ಕ್ಕೂ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಸಿವು ನೀಗಿಸಲು ಸಮಾನ ಮನಸ್ಕರ ತಂಡವೊಂದು ಇಂದು ಕಾಲೇಜಿನಲ್ಲಿ ಕ್ಯಾಂಟಿನ್‌ ಆರಂಭಿಸಿದೆ.

ಗ್ರಾಮೀಣ ಬಡ ವಿದ್ಯಾರ್ಥಿಗಳ ಹಸಿವು ನೀಗಿಸುವ ಸಮಾನ ಮನಸ್ಕರ

₹10 ಗೆ ಫಲಾವ್, ಬಿಸಿಬೇಳೆ ಬಾತ್, ಚಿತ್ರಾನ್ನ/ ಊಟ ನೀಡುವ ಚಿಂತನೆ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಓದಲು ಬರುವ 1200ಕ್ಕೂ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಸಿವು ನೀಗಿಸಲು ಸಮಾನ ಮನಸ್ಕರ ತಂಡವೊಂದು ಇಂದು ಕಾಲೇಜಿನಲ್ಲಿ ಕ್ಯಾಂಟಿನ್‌ ಆರಂಭಿಸಿದೆ.

ಕೇವಲ ₹10 ಕ್ಕೆ ಬಿಸಿಬಿಸಿಯಾದ ಫಲಾವ್, ಬಿಸಿಬೇಳೆ ಬಾತ್, ಚಿತ್ರಾನ್ನ ಅನಿಯಮಿತವಾಗಿ ಉಣಬಡಿಸುವುದು ಈ ಕ್ಯಾಂಟಿನ್ ಉದ್ದೇಶ. ಬರುವ ದಿನಗಳಲ್ಲಿ ಊಟ ನೀಡುವ ಚಿಂತನೆಯನ್ನೂ ಈ ತಂಡ ಹೊಂದಿದೆ. ಹೀಗೆ ಸರ್ಕಾರಿ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳ ಹಸಿವು ನೀಗಿಸಲು ಖಾಸಗೀಯವರು ಆರಂಭಿಸಿದ ರಾಜ್ಯದ ಮೊದಲ ಕ್ಯಾಂಟಿನ್‌ ಇದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಲೂಕಿನ ಏಕೈಕ ಸರ್ಕಾರಿ ಪದವಿ ಕಾಲೇಜು ಇದು. ತಾಲೂಕಿನ ಗಡಿಭಾಗದ ಹರವಿ, ಬನ್ನಿಮಟ್ಟಿ, ಮೈಲಾರ, ಬ್ಯಾಲಹುಣಸಿ, ಮಾಗಳ, ಇಟಗಿ ಗ್ರಾಮಗಳಿಂದ ಸುಮಾರು 30, 35 ಕಿಮೀ ದೂರ ಕ್ರಮಿಸಿ ಈ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬೆಳಗ್ಗೆ 7 ಗಂಟೆಗೆ ಮನೆ ಬಿಟ್ಟಿರುತ್ತಾರೆ. ಮರಳಿ ಹೋಗುವುದು ಸಂಜೆ 4ಕ್ಕೆ. ಪಟ್ಟಣದಿಂದ 2 ಕಿಮೀ ಅಂತರದಲ್ಲಿರುವ ಈ ಕಾಲೇಜಿನ ಸುತ್ತ-ಮುತ್ತ ಯಾವುದೇ ಹೊಟೇಲ್‌ ಇಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಹಸಿದೊಕೊಂಡೇ ಪಾಠ ಕೇಳುವುದು ಅನಿವಾರ್ಯವಾಗಿತ್ತು.

ಗ್ರಾಮೀಣ ಬಡ ವಿದ್ಯಾರ್ಥಿಗಳ ಈ ಹಸಿವಿನ ಕೇಕೆಗೆ ಕಿವಿಗೊಟ್ಟ ಕೆ.ಅಯ್ಯನಗೌಡರ್, ಬಸವರಾಜ ಸುರಪುರಮಠ ಸೇರಿದಂತೆ ಸಮಾನ ಮನಸ್ಕರು ಸೇರಿಕೊಂಡು "ಅಖಿಲ ಕರ್ನಾಟಕ ಸಮಾಜಮುಖಿ ಕಾಯಕ ಟ್ರಸ್ಟ್‌ " ಅಡಿಯಲ್ಲಿ ಈ ಕಾಲೇಜಿನಲ್ಲೇ ಹೊಟೇಲ್ ತೆರೆದು ಮಾನವೀಯ ಸೇವೆಗೆ ಮುಂದಾಗಿದ್ದಾರೆ.

ಉಪಹಾರದ ಬದಲು ಊಟ:

ಮಂಗಳವಾರ ಈ ಹೊಟೇಲ್ ಉದ್ಘಾಟಿಸಿದ ಸ್ಥಳೀಯ ಶಾಸಕ ಕೃಷ್ಣನಾಯ್ಕ, ಇಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಅವರ ಹಸಿವು ನೀಗಿಸಲು ಕ್ಯಾಂಟಿನ್‌ ಆರಂಭಿಸಿರುವುದು ಸುತ್ಯಾರ್ಹ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಉಪಹಾರದ ಬದಲು ಊಟದ ವ್ಯವಸ್ಥೆ ಮಾಡಿದರೆ ಅದಕ್ಕೆ ಅಗತ್ಯವಿರುವ ಸಹಕಾರ ನೀಡುವುದಾಗಿ ಘೋಷಿಸಿದರು.

ಈ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯದ ಜತೆಗೆ ಉತ್ತಮ ಬೋಧನೆ, ಪ್ರಯೋಗಾಲಯ ಸೇರಿದಂತೆ ಎಲ್ಲ ರೀತಿಯ ಅನುಕೂಲ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಗವಿಸಿದ್ದೇಶ್ವರ ಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಚೌಕಿಮಠದ ಸದ್ಗುರು ಗಾಡಿ ತಾತ, ರಾಮದೇವರ ದೇವಸ್ಥಾನದ ಧರ್ಮದರ್ಶಿ ಡಾ. ರಾಕೇಶಯ್ಯ ರಾಮಸ್ವಾಮಿ ಸಾನಿಧ್ಯ ವಹಿಸಿದ್ದರು.

ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ ಬೀ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಐಗೋಳ ಚಿದಾನಂದ, ವಾರದ ಗೌಸ್‌ ಮೋಹಿದ್ದೀನ್‌, ಎಂ.ಪರಮೇಶಪ್ಪ, ಎಚ್‌.ಪೂಜೆಪ್ಪ, ಎಂ.ಬಿ. ಬಸವರಾಜ, ಹಕ್ಕಂಡಿ ಮಹಾದೇವ, ಕೆ.ಪುತ್ರೇಶ, ಎನ್‌.ಕೋಟೆಪ್ಪ, ಹಾಲೇಶ, ಮಂಜುನಾಥ ಜೈನ್‌, ಕೋಡಿಹಳ್ಳಿ ಕೊಟ್ರೇಶ, ಡಿ.ಆಂಜನೇಯ, ಪಿ.ಎಂ. ವಿಲ್ಸನ್‌ ಸ್ವಾಮಿ, ಎಚ್‌.ಡಿ. ಜಗ್ಗೀನ್‌, ದೀಪದ ಕೃಷ್ಣಪ್ಪ, ಪುನೀತ್‌, ಟಿ.ಮಹಾಂತೇಶ, ಜೆ.ಬಸವರಾಜ, ಜೆ.ಶಿವರಾಜ, ಕೊಟ್ರೇಶ ನಾಯ್ಕ, ಜಾಸ್ತಿ ಶ್ರೀನಿವಾಸರೆಡ್ಡಿ, ಮಹಾಬಲೇಶ್ವರ ದಿವಾಕರ, ಲಲಿತಕುಮಾರ ಜೈನ್‌, ರಾಘವೇಂದ್ರ ರಾಯ್ಕರ್‌, ಕಾಲೇಜು ಪ್ರಾಚಾರ್ಯ ವಿಜಯಕುಮಾರ, ಕೆ.ಅಯ್ಯನಗೌಡ, ಬಿ.ಜಯಲಕ್ಷ್ಮೀ, ಸೋಮಕ್ಕ, ಶಕುಂತಲ, ಸವಿತಾ ಹರವಿ, ರುದ್ರಪ್ಪ ಸೇರಿದಂತೆ ಇತರರಿದ್ದರು.

Share this article