ಉದ್ಯಮಿಗಳಿಂದ ಆರ್ಥಿಕ ನೆರವು ಕೊಡಿಸುವುದಾಗಿ ನಂಬಿಸಿ 35 ಲಕ್ಷ ರು. ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಆರು ಮಂದಿ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಮಾಲಿಕರು ದೂರು ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಉದ್ಯಮಿಗಳಿಂದ ಆರ್ಥಿಕ ನೆರವು ಕೊಡಿಸುವುದಾಗಿ ನಂಬಿಸಿ 35 ಲಕ್ಷ ರು. ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಆರು ಮಂದಿ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಮಾಲಿಕರು ದೂರು ದಾಖಲಿಸಿದ್ದಾರೆ.
ಹೆಣ್ಣೂರಿನಲ್ಲಿರುವ ಖಾಸಗಿ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ಯಶೋಧ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಮರಪಲ್ಲಿ ಸುರೇಶ್ ಹಾಗೂ ಅವರ ಸಹಚರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಾಣಸವಾಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
100 ಕೋಟಿ ನೆರವು-ವಂಚನೆ
ನಮ್ಮೂರಿನ ಸುರೇಶ್ ಅವರು ನನಗೆ ಪರಿಚಯಸ್ಥರು. ಮಾಜಿ ಶಾಸಕ ಕಿಮ್ಮನೆ ರತ್ನಾಕರ ಅವರಿಗೆ ಆಪ್ತ ಎಂದು ಆತ ಹೇಳಿಕೊಂಡಿದ್ದ. ನಮ್ಮ ಕಾಲೇಜು ಟ್ರಸ್ಟ್‌ಗೆ ಸಹಾಯ ಕೇಳಿದೆ. ಈ ವೇಳೆ ಹೈದರಾಬಾದ್ ಮೂಲದ ವೆಂಕಟರಮಣ ಎಂಬಾತನನ್ನು ಪರಿಚಯ ಮಾಡಿಕೊಟ್ಟರು. ಆತ ಉದ್ಯಮಿಗಳಿಂದ ಸಿಎಸ್‌ಆರ್ ಫಂಡ್‌ನಲ್ಲಿ ಆರ್ಥಿಕ ನೆರವು ಕೊಡಿಸುವುದಾಗಿ ಮಾತು ಕೊಟ್ಟಿದ್ದ ಎಂದು ದೂರುದಾರೆ ಯಶೋಧ ಆರೋಪಿಸಿದ್ದಾರೆ.
ಪ್ರತಿಷ್ಠಿತ ಕಂಪನಿಯ ಸಿಎಸ್‌ಆರ್ ಅನುದಾನ ಎಂದಿದ್ದರು. ನಾವು ಆತನ ಮಾತಿನ ಮೇಲೆ ವಿಶ್ವಾಸ ಹೊಂದಿದ್ದೆವು. ಇದಾದ ನಂತರ ಶಿವಾಜಿನಗರದ ಬಟ್ಟೆ ವ್ಯಾಪಾರಿಯೊಬ್ಬನನ್ನು ಕಂಪನಿ ಪ್ರತಿನಿಧಿ ಅಂತಾ ಹೇಳಿ ಪರಿಚಯಿಸಿದರು. ಬಳಿಕ ಏನೇನೋ ಸಬೂಬು ಹೇಳಿ ಹಂತ ಹಂತವಾಗಿ 35 ಲಕ್ಷ ರು. ಹಣ ಪಡೆದು ಆರೋಪಿಗಳು ಟೋಪಿ ಹಾಕಿದ್ದಾರೆ ಎಂದು ದೂರಲಾಗಿದೆ.
ಬಾಣಸವಾಡಿಗೆ ಕೇಸ್ ವರ್ಗ
ಈ ವಂಚನೆ ಪ್ರಕರಣದ ತನಿಖೆಯನ್ನು ಬಾಣಸವಾಡಿ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ. ಈ ಮೊದಲು ಹೆಣ್ಣೂರು ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ತನಿಖೆ ಸೂಕ್ತವಾಗಿ ನಡೆಯುತ್ತಿಲ್ಲ ಎಂದು ದೂರುದಾರರು ಆಕ್ಷೇಪಿಸಿದ್ದರು. ಹೀಗಾಗಿ ಬಾಣಸವಾಡಿ ಪೊಲೀಸರಿಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.